ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಹಿಟ್ ಆ್ಯಂಡ್ ರನ್ ಕೇಸ್‍ಗೆ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಸಯ್ಯದ್ ವಾಸೀಮ್ ಅಲಿ (26) ಮೃತ ವ್ಯಕ್ತಿ. ಸಯ್ಯದ್ ಹೈದರಾಬಾದ್ ಮೂಲದವರಾಗಿದ್ದು, ಕ್ಯಾಲಿಫೋರ್ನಿಯಾದ ಫ್ರೀಮಂಟ್‍ನಲ್ಲಿ ವಾಸಿಸುತ್ತಿದ್ದರು. ಸಯ್ಯದ್ ವಾಸೀಮ್ ಡ್ರೈವರ್ ಆಗಿ ಟಯೋಟಾ ಓಡಿಸುತ್ತಿದ್ದರು. ಅಪಘಾತ ಆಗುವಾಗ ಅವರ ಕಾರಿನಲ್ಲಿ ಪ್ರಯಾಣಿಕನಾದ ಸೆಲಾ ಹೆನ್ರಿಕ್ಯೂಯಿಸ್ ಪ್ರಯಾಣಿಸುತ್ತಿದ್ದರು.
ಪೊಲೀಸರ ಪ್ರಕಾರ, ಭಾನುವಾರ ನಸುಕಿನ ಜಾವ 1.15ಕ್ಕೆ ಈ ಅಪಘಾತ ಸಂಭವಿಸಿದೆ. ಥರ್ಡ್ ಸ್ಟ್ರೀಟ್‍ನಲ್ಲಿ ಮರ್ಸಿಡಿಸ್ ಬೆಂಜ್‍ನ ಚಾಲಕನೊಬ್ಬ ಪಾಲ್ ಅವೆನ್ಯೂಯಲ್ಲಿ ಕೆಂಪ್ ಬಣ್ಣ ಇದ್ದರು ಸಹ ಕಾರನ್ನು ನಿಲ್ಲಿಸದೇ ಹಾಗೇ ಚಲಾಯಿಸಿದ್ದಾನೆ. ಕಾರು ನಿಲ್ಲಿಸದ ಪರಿಣಾಮ ಟಯೋಟಾಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಅಪಘಾತದಲ್ಲಿ ವಾಸೀಮ್ ಅಲಿ ಹಾಗೂ ಹೆನ್ರಿಕ್ಯೂಯಿಸ್ ಸ್ಥಳದಲ್ಲೇ ಮೃತಪಟ್ಟರೆ, ಮರ್ಸಿಡಿಸ್ ಕಾರಿನಲ್ಲಿ ಇದ್ದ ಇಬ್ಬರು ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗುವ ನಿರೀಕ್ಷೆಯಿದೆ. ಈ ಅಪಘಾತ ನಡೆದ ನಂತರ ಚಾಲಕ ತನ್ನ ಮರ್ಸಿಡಿಸ್ ಕಾರು ಬಿಟ್ಟು ಪರಾರಿಯಾಗಿದ್ದು, ಆತನನ್ನು ಇದುವರೆಗೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಯ್ಯದ್ ವಾಸೀಮ್ ಮೃತದೇಹ ಹಾಗೂ ಅವರಿಗೆ ಸೇರಿದ್ದ ವಸ್ತುಗಳನ್ನು ಮರಳಿ ಹೈದರಾಬಾದ್‍ಗೆ ಸಾಗಿಸಲು ಅವರ ಕುಟುಂಬದ ಪರವಾಗಿ ಗೋಫಂಡ್‍ಮೀ ಪೇಜ್ ಕ್ರಿಯೇಟ್ ಮಾಡಿ ಹಣವನ್ನು ಸಂಗ್ರಹಿಸುತ್ತಿದೆ.