ಹೈದರಾಬಾದ್: ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ ಹೈದರಾಬಾದ್ ಗ್ರಾಹಕರ ವೇದಿಕೆ ಇಲ್ಲಿನ ಬಂಜಾರಾ ಹಿಲ್ಸ್ ನ ಜಿವಿಕೆ ಮಾಲ್‍ನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ರೂ. ದಂಡ ವಿಧಿಸಿದೆ. ಜೊತೆಗೆ ದೂರುದಾರರಿಗೆ 1 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.
Advertisement
ವಿಜಯ್ ಗೋಪಾಲ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬಳಿಕ ಈ ದಂಡ ವಿಧಿಸಲಾಗಿದೆ. ನನ್ನ ಸ್ವಂತ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಹಾಗೆ ಒಂದು ನೀರಿನ ಬಾಟಲಿಗೆ ಮಲ್ಟಿಪ್ಲೆಕ್ಸ್ ನೊಳಗೆ 50 ರೂ. ತೆಗೆದುಕೊಂಡ್ರು. ಇದೇ ಬಾಟಲಿಗೆ ಹೊರಗಡೆ 20 ರೂ. ಎಂಆರ್‍ಪಿ ಇದೆ ಎಂದು ವಿಜಯ್ ಗ್ರಾಹಕರ ವೇದಿಕೆಗೆ ತಿಳಿಸಿದ್ದರು. ಕಳೆದ ಜೂನ್‍ನಲ್ಲಿ ವಿಜಯ್ ಮಲ್ಟಿಪ್ಲೆಕ್ಸ್ ಗೆ ಭೇಟಿ ನೀಡಿದ್ದು , ಮಾಲ್‍ಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆದು ಜನರನ್ನ ಲೂಟಿ ಮಾಡುತ್ತಿವೆ ಎಂದು ಆರೋಪಿಸಿದ್ದರು.
Advertisement
ಒಂದೇ ಬಾಟಲಿಗೆ ಎರಡು ಎಂಆರ್‍ಪಿ ಇರಬಾರದು ಎಂಬುದನ್ನು ಸ್ಪಷ್ಟಪಡಿಸಿರುವ ಗ್ರಾಹಕರ ವೇದಿಕೆ, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸದಂತೆ ಐನಾಕ್ಸ್ ಗೆ ಸೂಚಿಸಿದೆ. ಅಲ್ಲದೆ ಗ್ರಾಹಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಥಿಯೇಟರ್ ನಿರ್ವಾಹಕರಿಗೆ ಹೇಳಿದೆ ಎಂದು ವರದಿಯಾಗಿದೆ.
Advertisement
ಕಳೆದ ತಿಂಗಳಷ್ಟೆ ಹೈದರಾಬಾದ್‍ನ ಶಾಹ್ ಗೌಸ್ ರೆಸ್ಟೊರೆಂಟ್‍ನಲ್ಲಿ ತಂಪು ಪಾನೀಯಕ್ಕೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ ಫೆಬ್ರವರಿಯಲ್ಲಿ ಇಲ್ಲಿನ ಬಂಜಾರಾ ಹಿಲ್ಸ್ ನ ಸಾರ್ವಿ ಹೋಟೆಲ್‍ನಲ್ಲಿ 20 ರೂ. ಎಂಆರ್‍ಪಿ ಇದ್ದ ನೀರಿನ ಬಾಟಲಿಗೆ 40 ರೂ. ಸ್ವೀಕರಿಸಿದ್ದಕ್ಕೆ ಹೋಟೆಲ್‍ನವರಿಗೆ 20 ಸಾವಿರ ರೂ ದಂಡ ವಿಧಿಸಲಾಗಿತ್ತು ಎಂದು ವರದಿಯಾಗಿದೆ.
Advertisement
ವಿಜಯ್ ಗೋಪಾಲ್ ಈ ಹಿಂದೆ ಹೈದರಾಬಾದ್‍ನ ಕಾಚಿಗುಡದಲ್ಲಿ ವೆಂಕಟರಮಣ ಥಿಯೇಟರ್ ಹಾಗೂ ತಾರಕರಾಮ ಥಿಯೇಟರ್‍ನಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡಿದ್ದಕ್ಕೆ ದೂರು ದಾಖಲಿಸಿದ್ದರು.
Inox Hyd fonnd guilty, hiked MRP n wtr bttle. All theatrs drctd to stop it imdtly n sply free wtr in Hyd n scbad @ANI_news @hydcitypolice pic.twitter.com/5zUynCj0lt
— VijayGopal (@VijayGopal_) April 22, 2017