– ಕಾರಿನಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ
ವಾಷಿಂಗ್ಟನ್: ಚಿಕಾಗೋದಲ್ಲಿ 19 ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಕ್ರೂರ ಹತ್ಯೆಯು ಅಮೆರಿಕದಲ್ಲಿಯ ಅನಿವಾಸಿ ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ.
ಹೈದರಾಬಾದ್ ಮೂಲದ ರೂತ್ ಜಾರ್ಜ್ ಕೊಲೆಯಾದ ವಿದ್ಯಾರ್ಥಿನಿ. ರೂತ್ ಜಾರ್ಜ್ ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದಳು. ಕಾಲೇಜ್ ಕ್ಯಾಂಪಸ್‍ನ ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಶನಿವಾರ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಚಿಕಾಗೊ ಮೆಟ್ರೋ ನಿಲ್ದಾಣದಲ್ಲಿ 26 ವರ್ಷದ ಆರೋಪಿ ಡೊನಾಲ್ಡ್ ಥರ್ಮನ್‍ನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿಯು ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ ಎಂದು ತಿಳಿದು ಬಂದಿದೆ. ಬಂಧಿತ ಡೊನಾಲ್ಡ್ ಥರ್ಮನ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಕೃತ್ಯದ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಶುಕ್ರವಾರ ಸಂಜೆಯಿಂದ ಮಗಳು ಕಾಣಿಸುತ್ತಿಲ್ಲ ಎಂದು ಜಾರ್ಜ್ ಪೋಷಕರು, ವಿಶ್ವವಿದ್ಯಾಲಯದ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್‍ಗೆ ಕರೆ ಮಾಡಿದ್ದರು. ಬಳಿಕ ಮೊಬೈಲ್ ಟ್ರ್ಯಾಕ್ ಮಾಡಿದಾಗ ಕಾಲೇಜ್ ಕ್ಯಾಂಪಸ್‍ನ ಗ್ಯಾರೇಜ್‍ನಲ್ಲಿ ಸಿಗ್ನಲ್ ತೋರಿಸಿತ್ತು. ಈ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಕಾರಿನ ಹಿಂಭಾಗದ ಸೀಟ್‍ನಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
Advertisement
ಆರೋಪಿಯು ವಿದ್ಯಾರ್ಥಿನಿ ರೂತ್ ಜಾರ್ಜ್ ಹಿಂದೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯವು ವಿಶ್ವವಿದ್ಯಾಲಯದ ಕ್ಯಾಮೆರಗಳಲ್ಲಿ ಸೆರೆಯಾಗಿತ್ತು. ಈ ವಿಡಿಯೋ ತುಣುಕನ್ನು ಪಡೆದುಕೊಂಡ ಪೊಲೀಸರು ಆರೋಪಿಗೆ ಬಲೆ ಬಿಸಿದ್ದರು. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.
ಪೊಲೀಸರು ಆರೋಪಿ ಥರ್ಮನ್‍ನನ್ನು ಮೆಟ್ರೋ ರೈಲು ನಿಲ್ದಾಣದ ಬಳಿ ಭಾನುವಾರ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.