Connect with us

ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

ಹೈದರಾಬಾದ್: ತನ್ನ ಪತ್ನಿಗೆ ಅಂಚೆ ಪತ್ರದಲ್ಲಿ ಮೂರು ಬಾರಿ ತಲಾಖ್ ಎಂದು ಬರೆದು ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಹನೀಫ್ (38) ಬಂಧಿತ ವ್ಯಕ್ತಿ. ಹನೀಫ್ ಕುಕಟಪಲ್ಲಿಯ ಟೈಕ್ಸ್ ಟೈಲ್ಸ್ ಶೋರೂಂ ನಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 9 ರಂದು ತಲಾಬ್‍ಕಟ್ಟಾ ಗ್ರಾಮದ 26 ವರ್ಷದ ಯುವತಿಯನ್ನು ಮದುವೆ ಮಾಡಿಕೊಂಡಿದ್ದ.

ಮದುವೆಯ ಮರುದಿನ ಮನೆಬಿಟ್ಟು ಹೋಗಿದ್ದ ಹನೀಫ್ ತಾನು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೆಂಡತಿಗೆ ಮಾಹಿತಿ ನೀಡಿದ್ದ. ಮಾರ್ಚ್ 19 ರಂದು ಹನೀಫ್ ತನ್ನ ಪತ್ನಿಗೆ ಪೋಸ್ಟ್ ಮುಖಾಂತರ ತಲಾಖ್ ಪತ್ರವನ್ನು ಕಳುಹಿಸಿದ್ದ. ಪತ್ರದಲ್ಲಿ ಮೂರು ಬಾರಿ ತಲಾಖ್ ಎಂದು ಬರೆದು ಈ ನಿರ್ಧಾರವನ್ನು ಇಬ್ಬರ ಸಮ್ಮುಖದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದ. ನಂತರ ಇದೇ ವಿಚಾರದ ಬಗ್ಗೆ ಫೋನ್ ಮಾಡಿ ಮಾತನಾಡಿದ್ದ.

ಪತಿಯ ತಲಾಖ್ ಪತ್ರ ಪಡೆದ ಯುವತಿ ತವರುಮನೆಗೆ ತೆರಳಿದ್ದು, ಪೋಷಕರಿಗೆ ಈ ವಿಚಾರವನ್ನ ತಿಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹನೀಫ್‍ನನ್ನು ಬಂಧಿಸಿದ್ದಾರೆ.

ಇಸ್ಲಾಂನ ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ತ್ರಿವಳಿ ತಲಾಖ್ ನಿಷೇಧಿಸಬೇಕೋ ಬೇಡವೋ ಎಂಬ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದ್ದು ಮೇ 11ರಿಂದ ವಿಚಾರಣೆ ಆರಂಭವಾಗಲಿದೆ.

 

Advertisement
Advertisement