ಹೈದರಾಬಾದ್: ಅಪ್ರಾಪ್ತ ಯುವಕನ ಜೊತೆ ಓಡಿಹೋದ ಯುವತಿಯನ್ನು ಗ್ರಾಮಸ್ಥರು ಕರೆತಂದು ಮನಬಂದತೆ ಥಳಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರ ಸಮ್ಮುಖದಲ್ಲೇ ಯುವತಿಯನ್ನು ಆ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು ಕೋಲಿನಿಂದ ಭೀಕರವಾಗಿ ಥಳಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.
Advertisement
Advertisement
ಈ ವಿಡಿಯೋದಲ್ಲಿ ಯುವಕ ತಲೆ ಬಗ್ಗಿಸಿ ಕುಳಿತಿರುತ್ತಾನೆ. ಯುವತಿಯನ್ನು ಗ್ರಾಮದ ಹಿರಿಯ ವ್ಯಕ್ತಿಯೊಬ್ಬ ವಿಚಾರಣೆ ನಡೆಸುತ್ತಿರುತ್ತಾನೆ. ಹಿರಿಯ ವ್ಯಕ್ತಿ ಕೇಳಿದ ಪ್ರಶ್ನೆಗೆ ಯುವತಿ ನೀಡಿದ ಉತ್ತರದಿಂದ ಕೋಪಗೊಂಡ ಆತ ಆಕೆಯನ್ನು ಕಾಲಿನಿಂದ ಒದ್ದು, ಮೊದಲು ಕೈಯಲ್ಲಿ ಥಳಿಸುತ್ತಾನೆ. ನಂತರ ಕೋಲನ್ನು ತೆಗೆದುಕೊಂಡು ಯುವತಿಗೆ ಮನಬಂದಂತೆ ಹಲ್ಲೆ ಮಾಡುತ್ತಾನೆ.
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಅನಂತ್‍ಪುರದ ಪೊಲೀಸ್ ಮುಖ್ಯಸ್ಥ ಬಿ ಯೆಸುದಾಸ್, ಈ ಪ್ರಕರಣದಲ್ಲಿ ಗ್ರಾಮದ ಹಿರಿಯ ವ್ಯಕ್ತಿಯ ಬಗ್ಗೆ ದೂರು ನೀಡಲು ಯಾರೂ ಮುಂದೆ ಬರುತ್ತಿಲ್ಲ. ಅವರ ಪೋಷಕರು ದೂರು ನೀಡುತ್ತಿಲ್ಲ. ಹಿರಿಯರು ಈ ವಿಚಾರದಲ್ಲಿ ತಮ್ಮ ಪರವಾಗಿ ಮಧ್ಯಪ್ರವೇಶ ಮಾಡಿದ್ದಾರೆ ಆದ್ದರಿಂದ ನಾವು ದೂರು ನೀಡಲ್ಲ ಎಂದು ಪೋಷಕರು ಹೇಳಿದ್ದಾರೆ. ಈ ಪ್ರಕರಣ ವಿರುದ್ಧ ಅ ಯುವತಿಯೇ ದೂರು ನೀಡುತ್ತಾಳಾ ಎಂದು ಕೇಳಲು ಮಹಿಳಾ ಪೇದೆಯೊಬ್ಬರನ್ನು ಕಳಿಸಿದ್ದೇವೆ, ಆಕೆ ದೂರು ನೀಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
Advertisement
ಈ ಘಟನೆಯ ಕುರಿತು ಮಾತನಾಡಿರುವ ಮಕ್ಕಳ ಹಕ್ಕುಗಳ ಸಂಘದ ಕಾರ್ಯಕರ್ತ ಅಚ್ಯುತ್ ರಾವ್, ಮಕ್ಕಳ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳನ್ನು ಜೆಜೆ(ಭಾಲಾಪರಾಧಿ ನ್ಯಾಯ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ದಾಖಲಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಇದು ಅವರಿಗೆ ಅರಿವಿಲ್ಲದೆ ಮಾಡಿದ್ದಾರೆ. ಈ ರೀತಿ ಆದಾಗ ಹಿರಿಯರು ಅವರಿಗೆ ಬುದ್ಧಿವಾದ ಹೇಳಬೇಕು. ಅದನ್ನು ಬಿಟ್ಟು ಪೊಲೀಸರ ರೀತಿಯಲ್ಲಿ ವರ್ತಿಸಬಾರದು ಎಂದು ಹೇಳಿದ್ದಾರೆ.