ಹೈದರಾಬಾದ್: ಹಿರಿಯ ಸಹೋದ್ಯೋಗಿಗಳಿಂದ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಸಾರ್ವಜನಿಕ ವಲಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‍ಇಎಲ್) ಕಂಪನಿಯ ಮಹಿಳಾ ಉದ್ಯೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಭೋಪಾಲ್ ಮೂಲದ 33 ವರ್ಷದ ನೇಹಾ ಚೌಕ್ಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನೇಹಾ ಮಹಿಳಾ ಅಕೌಂಟ್ಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಉನ್ನತ ಅಧಿಕಾರಿ ಮತ್ತು ಇತರ ಆರು ಸಹೋದ್ಯೋಗಿಗಳು ಕಿರುಕುಳ ನೀಡಿದ ಕಾರಣ ತನ್ನ ಬೆಡ್ ರೂಮ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಭೋಪಾಲ್ ಮೂಲದವರಾದ ನೇಹಾ ತನ್ನ ಗಂಡನ ಜೊತೆ ಹೈದರಾಬಾದ್‍ನ ಮಿಯಾಪುರದ ಭನು ಟೌನ್‍ಶಿಪ್‍ನಲ್ಲಿ ವಾಸವಾಗಿದ್ದರು. ಸಹೋದ್ಯೋಗಿಗಳ ಕಿರುಕುಳವನ್ನು ತಳಲಾರದೆ ಗುರುವಾರ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಮನೆಗೆ ಬಂದ ಪತಿ ಸುನೀಲ್ ಕೋಣೆಯ ಬಾಗಿಲು ತೆರೆದಾಗ ವಿಚಾರ ಬೆಳಕಿಗೆ ಬಂದಿದೆ.
Advertisement
ಈ ವಿಚಾರವಾಗಿ ಡೆತ್ ನೋಟ್ ಬರೆದಿರುವ ನೇಹಾ ನನ್ನ ಸಾವಿಗೆ ಡಿಜಿಎಂ ಕಿಶೋರ್ ಅರ್ಥಕುಮಾರ್ ಮತ್ತು ತೊಟ್ಟೊ ನೌಕರರಾದ ಸ್ವೈನ್, ಮೋಹನ್ ಲಾಲ್ ಸೋನಿ, ಸುಮಲತಾ, ಗೋಪಿರಾಮ್, ನಿತಿನ್, ಸೀತಾರಾಮ್ ಮತ್ತು ಚರಣ್‍ರಾಜ್ ಕಾರಣ ಎಂದು ನೇಹಾ ಉಲ್ಲೇಖಿಸಿದ್ದಾರೆ. ಜೂನ್‍ನಲ್ಲಿ ಭೋಪಾಲ್‍ನಿಂದ ವರ್ಗಾವಣೆಯಾದ ನಂತರ ಹೈದರಾಬಾದ್‍ಗೆ ಆಗಮಿಸಿದಾಗಿನಿಂದ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಬರೆದಿದ್ದಾರೆ.
Advertisement
ಇದರ ಜೊತೆಗೆ ಈ ಎಂಟು ಜನ ಸೇರಿಕೊಂಡು ನನ್ನ ಫೋನ್ ಟ್ಯಾಪಿಂಗ್ ಮಾಡಿದ್ದಾರೆ. ನನ್ನ ಫೋನಿನಿಂದ ಬೇರೆಯವರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಕೂಡ ಆರೋಪಿಸಿದ್ದಾರೆ. ನನ್ನನ್ನು ಕ್ಷಮಿಸು ಸುನೀಲ್ ನಿನ್ನ ಜೊತೆ ಜೀವನದ ಕೊನೆ ಕ್ಷಣದವರೆಗೂ ಇರಬೇಕು ಎಂದುಕೊಂಡು ಮದುವೆಯಾದೆ. ಆದರೆ ನಿನಗೆ ಕೊಟ್ಟ ಮಾತನ್ನು ನನಗೆ ಉಳಿಸಿಕೊಳ್ಳಲು ಆಗಲಿಲ್ಲ ಎಂದು ನೇಹಾ ಪತ್ರದಲ್ಲಿ ಬರೆದಿದ್ದಾರೆ.
ಈಗ ಈ ವಿಚಾರದ ಬಗ್ಗೆ ನೇಹಾ ಪತಿ ಸುನೀಲ್ ಪೊಲೀಸರಿಗೆ ದೂರು ನೀಡಿದ್ದು, ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇನ್ಸ್‍ಪೆಕ್ಟರ್ ವೆಂಕಟೇಶ್ ಶಮಾಲಾ ತಿಳಿಸಿದ್ದಾರೆ.