ಹೈದರಾಬಾದ್: ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಸುದ್ದಿ ತಿಳಿದು ಮೂರು ದಿನಗಳ ನಂತರ ಪತಿ ಚಲಿಸುತ್ತಿರುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದಿದೆ.
ಜಂಗಯ್ಯ(40) ಆತ್ಮಹತ್ಯೆಗೆ ಶರಣಾದ ಪತಿ. ಜಂಗಯ್ಯ ತನ್ನ ಪತ್ನಿ ರಮಾ ದೇವಿಯ ಸಾವಿನ ವಿಷಯ ತಿಳಿದು ಲಂಡನ್‍ನಿಂದ ಶುಕ್ರವಾರ ಭಾರತಕ್ಕೆ ಹಿಂತಿರುಗಿದ್ದರು. ಪತ್ನಿಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಪ್ರಕಾಶಂ ಜಿಲ್ಲೆಗೆ ಬರುತ್ತಿದ್ದನು. ಆದರೆ ಶನಿವಾರ ಜಂಗಯ್ಯ ಮೃತದೇಹ ಗಟ್‍ಕೇಸರ್ ನಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಮಾದೇವಿ ಬುಧವಾರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ರಮಾದೇವಿಯ ಕುಟುಂಸ್ಥರು ಜಂಗಯ್ಯ, ರಮಾದೇವಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಜಂಗಯ್ಯ ವಿರುದ್ಧ ಐಪಿಸಿ ಸೆಕ್ಷನ್ 498 ಹಾಗೂ 306 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಜಂಗಯ್ಯ ಮತ್ತು ರಮಾದೇವಿ ಮೂರು ವರ್ಷಗಳ ಹಿಂದೆ ಮದುವೆಯಾಗಿ ಕೆಲವು ದಿನಗಳ ಕಾಲ ದುಬೈನಲ್ಲಿ ವಾಸಿಸುತ್ತಿದ್ದರು. ಬಳಿಕ ಇಬ್ಬರು ಲಂಡನ್‍ಗೆ ತೆರಳಿದ್ದರು. ಕಳೆದ ವರ್ಷ ರಮಾದೇವಿ ಹೆರಿಗೆಗೆಂದು ಭಾರತಕ್ಕೆ ಬಂದಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಳು. ನಂತರ 9 ತಿಂಗಳ ಕಾಲ ತನ್ನ ಪೋಷಕರ ಜೊತೆ ವಾಸಿಸುತ್ತಿದ್ದಳು. ರಮಾದೇವಿ ತನ್ನ ಮಗನ ಜೊತೆ ಲಂಡನ್‍ಗೆ ತೆರಳಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಳು. ಆದರೆ ಅಷ್ಟರಲ್ಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಂಗಯ್ಯ ಯಾವುದೇ ಡೆತ್‍ನೋಟ್ ಬರೆಯದೇ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಪತ್ನಿಯ ಸಾವಿನಿಂದ ಮನನೊಂದಿದ್ದನು ಎಂದು ಹೇಳಲಾಗಿದೆ. ಜಂಗಯ್ಯ ಶುಕ್ರವಾರ ಮಧ್ಯಾಹ್ನ ಹೈದರಾಬಾದ್‍ಗೆ ಬಂದಿಳಿದು, ಅಲ್ಲಿಂದ ಸಿಕಂದರಾಬಾದ್ ರೈಲ್ವೆ ನಿಲ್ದಾಣವನ್ನು ತಲುಪಿದ್ದನು. ಬಳಿಕ ಪ್ರಕಾಶಂ ಜಿಲ್ಲೆ ತಲುಪಲು ನೆಲ್ಲೂರು ಬೌಂಡ್ ರೈಲಿಗೆ ಟಿಕೆಟ್ ಖರೀದಿಸಿದ್ದನು. ಆದರೆ ಜಂಗಯ್ಯ ಘಟ್ಕೇಸರ್ ಹೇಗೆ ತಲುಪಿದ್ದನು ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ಜಂಗಯ್ಯ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಜಂಗಯ್ಯ ಮೃತದೇಹ ಸಿಕ್ಕ ಸ್ವಲ್ಪ ದೂರದಲ್ಲಿ ಆತನ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಮೊಬೈಲ್ ಫೋನ್ ಹಾಗೂ ಐಡಿ ಕಾರ್ಡ್ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.