ಮೂರು ವರ್ಷದ ಮಗನ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿದ

Public TV
2 Min Read
police

ಮುಂಬೈ: ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗನ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದ್ದು, ಪತ್ನಿಯ ಶೀಲ ಶಂಕಿಸಿ ಪತಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಮೊಹಮ್ಮದ್ ಅಖ್ಲಾಕ್ ನಸೀಂ ಖುರೇಷಿ(32) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನು ಪೊಲೀಸರು ಮಂಗಳವಾರ ಬಂಧಿಸಿ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Police Jeep

ಸೋಮವಾರ ರಾತ್ರಿ ಇವರಿಬ್ಬರ ನಡುವಿನ ಜಗಳ ತಾರಕಕ್ಕೇರಿ ಪತಿ, ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಘಟನೆಯನ್ನರಿತ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ 23 ವರ್ಷದ ಮರ್ಯಾಮ್ ಖುರೇಷಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಖ್ಲಾಕ್ ಮನೆಯೊಳಗಡೆ ಮರ್ಯಾಮ್ ಮೇಲೆ ಬೆಂಕಿ ಹಚ್ಚುತ್ತಿರುವುದನ್ನು ನೋಡಿದ ಸ್ಥಳೀಯ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಬಾಂದ್ರಾ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ, ಮರ್ಯಾಂಳನ್ನು ಭಾಭಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

policemen arrested in bribe case

ಇತ್ತ ಆರೋಪಿ ಅಖ್ಲಾಕ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನಾವಿಬ್ಬರೂ ಮದುವೆಯಾಗಿ 5 ವರ್ಷಗಳಾಗಿವೆ. ಆದರೆ 3 ತಿಂಗಳ ಹಿಂದೆಯಿಂದ ನಮ್ಮಿಬ್ಬರ ಮಧ್ಯೆ ಜಗಳಗಳಾಗುತ್ತಿವೆ. ಅಲ್ಲದೆ ಮುಂಬೈನಲ್ಲಿ ಪತ್ನಿ ಹಾಗೂ ಮಗನನ್ನು ಬಿಟ್ಟು ಕೆಲಸದ ನಿಮಿತ್ತ ನಾನು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿರುವ ತನ್ನ ಮನೆಗೆ ತೆರಳಿದ್ದೆ. ಅಲ್ಲಿಂದ ವಾಪಸ್ ಬರಬೇಕಾದರೆ ಪತ್ನಿಗೆ ನೆರೆಹೊರೆಯ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧವಿರುವುದು ಗೊತ್ತಾಯಿತು. ಆ ನಂತರದಿಂದ ಇಬ್ಬರ ಮಧ್ಯೆ ಪ್ರತಿನಿತ್ಯ ಜಗಳಗಳಾಗುತ್ತಿತ್ತು. ಅಲ್ಲದೆ ಆಕೆ ಮಾರುಕಟ್ಟೆಗೆಂದು ಹೊರಟರೂ ಆತ ಸಂಶಯ ಪಡುತ್ತಿದ್ದನು ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಕೂಡ ಇಬ್ಬರ ಮಧ್ಯೆ ಜಗಳವಾಗಿತ್ತು. ಗಲಾಟೆ ತಾರಕಕ್ಕೇರಿದ್ದರಿಂದ ಅಖ್ಲಾಕ್ ಅಲ್ಲೇ ಇದ್ದ ಸೀಮೆ ಎಣ್ಣೆಯನ್ನು ಪತ್ನಿ ಮೇಲೆ ಸುರಿದು, ಬಳಿಕ ಬೆಂಕಿ ಹಚ್ಚಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು ಆತನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಮತ್ತು 201(ಸಾಕ್ಷಿಯನ್ನು ಬಚ್ಚಿಟ್ಟಿದ್ದು) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

police 1 1

Share This Article
Leave a Comment

Leave a Reply

Your email address will not be published. Required fields are marked *