ಬೆಂಗಳೂರು: ಕೈ ಹಿಡಿದ ಪತ್ನಿಯ ಶೀಲ ಶಂಕಿಸಿದ ಪತಿಯೋರ್ವ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ವಸಂತ ಮತ್ತು ಮುರಗೇಶ್ ದಂಪತಿ 15 ವರ್ಷಗಳ ಹಿಂದೆ ನಗರಕ್ಕೆ ಬಂದು ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು. ವಂಸತ ಅವರ ಶೀಲದ ಬಗ್ಗೆ ಪದೇ ಪದೇ ಅನುಮಾನ ಪಟ್ಟು ಮುರುಗೇಶ್ ಅವರಿಗೆ ಹೊಡೆದು, ಬಡೆದು ಹಿಂಸೆ ಮಾಡುತ್ತಿದ್ದನು. ಪ್ರತಿದಿನ ರಾತ್ರಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮುರುಗೇಶ್ ಸೋಮವಾರ ಕೂಡ ಪತ್ನಿ ಜೊತೆ ಜಗಳ ಮಾಡಿದ್ದನು.
ದಂಪತಿ ನಡುವೆ ಮಾತಿಗೆ ಮಾತು ಬೆಳೆದು, ಜಗಳ ವಿಕೋಪಕ್ಕೆ ಹೋಗಿ ಮುರುಗೇಶ್ ಕೋಪಗೊಂಡಿದ್ದನು. ಬಳಿಕ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ಮರುಕ್ಷಣವೇ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.