ನವದೆಹಲಿ: ಪತ್ನಿ ವೇಶ್ಯಾವಾಟಿಕೆಗೆ ನಿರಾಕರಿಸಿದ್ದಕ್ಕೆ ಪತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ದೆಹಲಿಯ ಪಶ್ಚಿಮ ಸಾಗರಪುರದಲ್ಲಿ ನಡೆದಿದೆ.
ಜಲೀಲ್ ಶೇಖ್(27) ತನ್ನ ಪತ್ನಿ ಫಾತಿಮಾ ಸರ್ದಾರ್ ಕೊಲೆಗೈದು, ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದನು. ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ
2014ರಲ್ಲಿ ಜಲೀಲ್ ಶೇಖ್, ಫಾತಿಮಾಳನ್ನು ಮದುವೆಯಾಗಿದ್ದ. ಈಕೆ ಜಲೀಲ್‍ನ ಎರಡನೇ ಹೆಂಡತಿಯಾಗಿದ್ದು, ದೆಹಲಿಯ ಪಶ್ಚಿಮ ಸಾಗರಪುರದ ಬಾಡಿಗೆ ಮನೆಯಲ್ಲಿ ಕಳೆದ ಏಳೆಂಟು ತಿಂಗಳಿಂದ ವಾಸವಾಗಿದ್ದರು. ಜಲೀಲ್‍ನ ಮೊದಲ ಹೆಂಡತಿ ಬಂಗಾಳದಲ್ಲಿ ವಾಸವಾಗಿದ್ದಾಳೆ. ಫಾತಿಮಾ ಹಾಗೂ ಜಲೀಲ್ ದೆಹಲಿಯಲ್ಲಿ ವಾಸಿಸುತ್ತಿದ್ದರು.
ಜಲೀಲ್ ಫಾತಿಮಾಳನ್ನು ವೇಶ್ಯಾವಾಟಿಕೆಗೆ ಇಳಿಯುವಂತೆ ಒತ್ತಾಯಿಸಿದ್ದಾನೆ. ಆದರೆ, ಫಾತಿಮಾ ಇದಕ್ಕೆ ವಿರೋಧಿಸಿದ್ದಾಳೆ. ಇದರಿಂದ ಕೋಪಗೊಂಡ ಜಲೀಲ್ ಆಗಸ್ಟ್ 5ರಂದು ಅವಳನ್ನು ಕೊಂದು ದೇಹವನ್ನು ಕಂಬಳಿಯಲ್ಲಿ ಸುತ್ತಿ ಚೀಲದಲ್ಲಿ ತುಂಬಿಸಿದ್ದ ಎಂದು ನೈಋತ್ಯ ದೆಹಲಿ ಪೊಲೀಸ್ ಆಯುಕ್ತ ದೇವೇಂದರ್ ಆರ್ಯ ತಿಳಿಸಿದ್ದಾರೆ.
ಮೃತದೇಹವನ್ನು ಸಾಗರಪುರದ ‘ಬರಾತ್ ಘರ್’ ಬಳಿ ಎಸೆದು ತನ್ನ ರಾಜ್ಯ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದಾನೆ. ಆಗಸ್ಟ್ 6ರಂದು ಪ್ರಕರಣ ನಡೆದಿದ್ದು, ಒಂದು ದಿನದ ನಂತರ ಶವವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 17ರಂದು ಸೌತ್ 24 ಪರಗಣ ಜಿಲ್ಲೆಯ ಫಾತಿಮಾಳ ಸಂಬಂಧಿಕರ ಬಳಿ ದೆಹಲಿ ಪೊಲೀಸರು ಆಕೆಯ ಫೋಟೋ ಪಡೆದಿದ್ದಾರೆ. ನಂತರ ಪಶ್ಚಿಮ ಬಂಗಾಳದ ಪೊಲೀಸರಿಗೆ ಕರೆ ಮಾಡಿ ಈ ಕುರಿತು ವಿವರಿಸಿ ಫೋಟೋ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಫಾತಿಮಾ ತಂದೆ ಹಾಗೂ ಚಿಕ್ಕಪ್ಪನಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನಿಡಿದ್ದಾರೆ.
ಮಾಹಿತಿ ನೀಡಿದ ಬಳಿಕ ಬುಧವಾರ ಕೋಲ್ಕತ್ತಾದ ರೇಲ್ವೆ ನಿಲ್ದಾಣದ ಬಳಿ ತನ್ನ ಬೈಕ್ ಮಾರಲು ಬಂದಾಗ ಪಶ್ಚಿಮ ಬಂಗಾಳ ಪೊಲೀಸರು ಜಲೀಲ್‍ನನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಆರ್ಯ ತಿಳಿಸಿದ್ದಾರೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.