ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೊಟ್ಟೆಗೆ 22 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಕೋಣನಕುಂಟೆಯ ಬಳಿ ನಡೆದಿದೆ.
ಗೀತಾ ಪತಿಯಿಂದ ಕೊಲೆಯಾದ ದುರ್ದೈವಿ. ಕೋಣನಕುಂಟೆಯ ರಾಯಲ್ ಕೌಂಟಿ ಬಳಿ ಇರುವ ಅಪಾರ್ಟ್ ಮೆಂಟ್‍ನ ಫ್ಲ್ಯಾಟ್‍ನಲ್ಲಿ ಈ ಘಟನೆ ನಡೆದಿದೆ. ಕುಮಾರ್ ಮತ್ತು ಗೀತಾ ಮದುವೆಯಾಗಿ 12 ವರ್ಷಗಳಾಗಿದ್ದು, ತಮ್ಮ ಮಗನೊಂದಿಗೆ ನೆಮ್ಮದಿಯಾಗಿ ಸಂಸಾರ ಮಾಡಿಕೊಂಡಿದ್ದರು. ಕುಮಾರ್ ಅಪಾರ್ಟ್ ಮೆಂಟ್‍ನಲ್ಲಿ ಸೆಕ್ಯೂರಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.
ಒಂದು ತಿಂಗಳ ಹಿಂದೆಯಷ್ಟೇ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಪ್ರತಿದಿನ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು. ಸೋಮವಾರ ರಾತ್ರಿ ಮತ್ತೆ ಜಗಳ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಕುಪಿತ ಪತಿ ಕುಮಾರ್, ಗೀತಾ ಅವರ ಹೊಟ್ಟೆಗೆ 22 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.
ಕೃತ್ಯದ ಬಳಿಕ ಕುಮಾರ್ ತನ್ನ ಹೊಟ್ಟೆಗೂ ಚುಚ್ಚಿಕೊಂಡಿದ್ದಾನೆ. ತಕ್ಷಣವೇ ಅಲ್ಲಿದ್ದವರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಗೀತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv