– 11 ವರ್ಷದ ದಾಂಪತ್ಯ ಜೀವನ ಕೊಲೆಯಲ್ಲಿ ಅಂತ್ಯ
ಹೈದರಾಬಾದ್: ಪ್ರೀತಿಸಿ ಮದ್ವೆಯಾಗಿದ್ದ ಪತಿಯನ್ನೇ ಪ್ರಿಯತಮನ ಜೊತೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಪಟ್ಟಣದಲ್ಲಿ ನಡೆದಿದೆ.
ಬಾಲಸುಬ್ರಹ್ಮಣ್ಯಂ (35) ಕೊಲೆಯಾದ ಪತಿ. ಆರೋಪಿ ಪತ್ನಿ ರೇಣುಕಾ ಪ್ರಿಯಕರ ನಾಗಿ ರೆಡ್ಡಿ ಸಹಾಯದಿಂದ ಲಾರಿಯಿಂದ ಬೈಕಿಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿಸಿದ್ದಾಳೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಏನಿದು ಪ್ರಕರಣ?
ಮೃತ ಬಾಲಸುಬ್ರಹ್ಮಣ್ಯಂ 11 ವರ್ಷದ ಹಿಂದೆ ನೀರುಗಟ್ಟುವಾರೀಪಲ್ಲಿ ಗ್ರಾಮದ ನಿವಾಸಿ ರೇಣುಕಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಬಾಲಸುಬ್ರಹ್ಮಣ್ಯಂ ಹಲವಾರು ವರ್ಷಗಳಿಂದ ಪಟ್ಟಣದ ಕದಿರಿ ರಸ್ತೆಯಲ್ಲಿ ಬುಕ್‍ಸ್ಟಾಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದನು. ಆದರೆ ವ್ಯಾಪಾರದಲ್ಲಿ ತುಂಬಾ ನಷ್ಟವಾದ ಪರಿಣಾಮ ಎರಡು ವರ್ಷದ ಹಿಂದೆ ತಿರುಪತಿಗೆ ಹೋಗಿದ್ದು, ಅಲ್ಲಿ ಟ್ರಾವೆಲ್ಸ್ ಬಿಸಿನೆಸ್ ಶುರು ಮಾಡಿದ್ದನು.
Advertisement
Advertisement
ಪತ್ನಿ ರೇಣುಕಾ ತನ್ನ ಮೂವರು ಮಕ್ಕಳೊಂದಿಗೆ ಮದನಪಲ್ಲಿಯಲ್ಲಿ ವಾಸಿಸುತ್ತಿದ್ದಳು. ಈ ವೇಳೆ ರೇಣುಕಾಗೆ ನಾಗಿರೆಡ್ಡಿಯ ಪರಿಚಯವಾಗಿದೆ. ಈತ ರಾಜಕೀಯ ನಾಯಕನಾಗಿದ್ದು, ದಿನಕಳೆದಂತೆ ಇವರಿಬ್ಬರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲದೇ ರೇಣುಕಾ ಕೂಡ ಆತನ ರಾಜಕೀಯ ಪಕ್ಷಕ್ಕೆ ಸೇರಿಕೊಂಡಿದ್ದು, ಆಗಾಗ ರೇಣುಕಾ ಮನೆಗೆ ನಾಗಿರೆಡ್ಡಿ ಬರುತ್ತಿದ್ದನು. ಇತ್ತೀಚೆಗೆ ಮೃತ ಬಾಲಸುಬ್ರಹ್ಮಣ್ಯಂ ಟ್ರಾವೆಲ್ಸ್ ಬಿಸಿನೆಸ್ ಬಿಟ್ಟು ತಿರುಪತಿಯಿಂದ ಮದನಪಲ್ಲಿಗೆ ವಾಪಸ್ ಬಂದು ಬೇರೆ ವ್ಯಾಪಾರ ಶುರು ಮಾಡಿದ್ದನು.
Advertisement
ಪತಿ ವಾಪಸ್ ಬಂದಾಗಿನಿಂದ ರೇಣುಕಾಗೆ ಪ್ರತಿದಿನ ಪ್ರಿಯಕರನನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪಕ್ಷದ ಕಾರ್ಯಕ್ರಮವಿದೆ ಎಂದು ನೆಪ ಹೇಳಿಕೊಂಡು ಭೇಟಿ ಮಾಡುತ್ತಿದ್ದಳು. ಒಂದು ದಿನ ನಾಗಿ ರೆಡ್ಡಿ ಜೊತೆ ರೇಣುಕಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಪತಿಗೆ ಗೊತ್ತಾಗಿದೆ. ಕೋಪಗೊಂಡ ಸುಬ್ರಹ್ಮಣ್ಯಂ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ರೇಣುಕಾ, ನಾಗಿ ರೆಡ್ಡಿ ಜೊತೆ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಗೆ ಅನೈತಿಕ ಸಂಬಂಧಕ್ಕೆ ಪತಿ ಅಡ್ಡವಾಗುತ್ತಾನೆ ಎಂದು ಪ್ರಿಯಕರನ ಸೇರಿಕೊಂಡು ಕೊಲೆ ಮಾಡಲು ಪ್ಲಾನ್ ಮಾಡಿದ್ದಳು. ಪ್ರಿಯಕರ ಲಾರಿಯಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಅದರಂತೆಯೇ ಶನಿವಾರ ರಾತ್ರಿ ಮೃತ ಸುಬ್ರಹ್ಮಣ್ಯಂ ಮಾತ್ರೆ ತರಲು ಮನೆಯಿಂದ ಬೈಕಿನಲ್ಲಿ ಮೆಡಿಕಲ್ ಶಾಪ್‍ಗೆ ಹೋಗಿದ್ದನು. ಪತಿ ಮನೆಯಿಂದ ಹೊರ ಹೋಗುತ್ತಿದ್ದಂತೆ ಪತ್ನಿ ಪ್ರಿಯಕರನಿಗೆ ಫೋನ್ ಮಾಡಿ ತಿಳಿಸಿದ್ದಾಳೆ.
ಆತ ಲಾರಿ ಚಾಲಕನಿಗೆ ಫೋನ್ ಮಾಡಿ ಸುಬ್ರಹ್ಮಣ್ಮಂನನ್ನು ಹಿಂಬಾಲಿಸುವಂತೆ ಹೇಳಿದ್ದಾನೆ. ಕೊನೆಗೆ ವಾಲ್ಮಿಕಿಪುರಂನಲ್ಲಿ ಹಿಂಬದಿಯಿಂದ ಸುಬ್ರಹ್ಮಣ್ಯಂ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಬ್ರಹ್ಮಣ್ಯಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದು ಸುಬ್ರಹ್ಮಣ್ಯಂ ಸಹೋದರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಪೊಲೀಸರು ಈ ಕುರಿತು ತನಿಖೆ ಮಾಡಿದಾಗ ರೇಣುಕಾ ಮತ್ತು ನಾಗಿ ರೆಡ್ಡಿಯ ಅನೈತಿಕ ಸಂಬಂಧಕ್ಕಾಗಿ ಈ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ರೇಣುಕಾ ಮತ್ತು ನಾಗಿ ರೆಡ್ಡಿಯ ಫೋನ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ರೇಣುಕಾಳನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದೇವೆ. ವಿಚಾರಣೆ ವೇಳೆ ನಡೆದ ಘಟನೆಯನ್ನು ಹೇಳಿದ್ದಾಳೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ. ಅಲ್ಲದೇ ಲಾರಿಯನ್ನು ವಶಪಡಿಸಿಕೊಂಡಿದ್ದು, ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.