– ವರದಕ್ಷಿಣೆ ನೀಡಲಿಲ್ಲ ಎಂದು ಮನೆಯಿಂದ ಹೊರಗೆ ಕಳುಹಿಸಿದ
– ಮನೆಯಿಂದ ಹೋಗಲು ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿದ
ಲಕ್ನೋ: ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ರಾಮ್‍ಪುರದಲ್ಲಿ ನಡೆದಿದೆ.
ಸೀಮಾ ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆ. ವರದಕ್ಷಿಣೆ ನೀಡಲಿಲ್ಲ ಎಂದು ಸೀಮಾ ಪತಿ ಮೊಹಮ್ಮದ್ ಆರೀಫ್ ಹಾಗೂ ಆತನ ಕುಟುಂಬಸ್ಥರು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಸೀಮಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಕಳೆದ ಎರಡು ವರ್ಷಗಳ ಹಿಂದೆ ಮೊಹಮ್ಮದ್ ಆರೀಫ್ ಜೊತೆ ಸೀಮಾಳ ಮದುವೆಯಾಗಿತ್ತು. ಮದುವೆಯಾದ ನಂತರ ಆರೀಫ್ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಸೀಮಾಳಿಗೆ ಕಿರುಕುಳ ನೀಡುತ್ತಿದ್ದರು. ಭಾನುವಾರ ಈ ವಿಷಯಕ್ಕಾಗಿ ಸೀಮಾ ಹಾಗೂ ಆರೀಫ್ ಕುಟುಂಬಸ್ಥರ ನಡುವೆ ಜಗಳ ನಡೆಯಿತು. ಈ ವೇಳೆ ಪತಿ ಆರೀಫ್, ಸೀಮಾಳನ್ನು ಮನೆಯಿಂದ ಹೊರಗೆ ಕಳುಹಿಸಲು ಮುಂದಾದನು. ಮನೆಯಿಂದ ಹೊರ ಹೋಗಲು ಸೀಮಾ ನಿರಾಕರಿಸಿದ್ದಕ್ಕೆ ಆರೀಫ್ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
Advertisement
Advertisement
ಸೀಮಾಳ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಬಳಿಕ ಬೆಂಕಿಯನ್ನು ಆರಿಸಿ ಸೀಮಾಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರು. ಮಹಿಳೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಜಿಲ್ಲಾಸ್ಪತ್ರೆ ವೈದ್ಯರು ಆಕೆಯನ್ನು ಮೂರದಾಬಾದ್‍ನ ಟಿಎಂಯೂ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಈ ಘಟನೆಯಿಂದ ಮಹಿಳೆಯ ದೇಹ ಶೇ. 80ರಷ್ಟು ಸುಟ್ಟು ಹೋಗಿದೆ. ಇನ್ನು ಸೀಮಾಳ ಪೋಷಕರು ಆರೀಫ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ಅಮರೀಶ್ ಕುಮಾರ್ ಪ್ರತಿಕ್ರಿಯಿಸಿ, ಪತಿಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಮ್ಯಾಜಿಸ್ಟ್ರೇಟ್ ಜೊತೆ ನಮ್ಮ ತಂಡವೊಂದು ಮಹಿಳೆ ಹೇಳಿಕೆ ಪಡೆಯಲು ಟಿಎಂಯೂ ಮೆಡಿಕಲ್ ಕಾಲೇಜಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.