ಲಕ್ನೋ: ಮದ್ಯ ಸೇವಿಸಿ ವ್ಯಕ್ತಿಯೋರ್ವ ಪತ್ನಿ ಜೊತೆ ಜಗಳವಾಡಿದ್ದು, ಈ ವೇಳೆ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕೊಲೆಗೈಯುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾನೆ.
ಉತ್ತರ ಪ್ರದೇಶದ ಸೂರಜ್‍ಪುರದಲ್ಲಿ ಘಟನೆ ನಡೆದಿದ್ದು, ಆರೋಪಿ ಹರಿ ಸೊಳಂಕಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪತ್ನಿ ಜೊತೆ ಜಗಳವಾಡುತ್ತಿದ್ದಾಗ 6 ಹಾಗೂ 3 ವರ್ಷದ ಇಬ್ಬರು ಮಕ್ಕಳನ್ನು ಆರೋಪಿ ಕೊಲೆಗೈದಿದ್ದಾನೆ.
ಗ್ರಾಮೀಣ ಎಸ್‍ಪಿ ಸಂಜೀವ್ ಸಿಂಗ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಸೊಳಂಕಿ ತುಂಬಾ ಕುಡಿದು ಜಗಳ ಮಾಡುತ್ತಿದ್ದ ಎಂದು ಆರೋಪಿಯ ಪತ್ನಿ ನಮಗೆ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.
ಘಟನೆ ನಡೆದ ಮರುದಿನ ಬೆಳಗ್ಗೆ ಒಬ್ಬ ಮಗಳ ಮೃತ ದೇಹವು ಮನೆಯಲ್ಲಿ ಪತ್ತೆಯಾಗಿದೆ. ಇನ್ನೊಬ್ಬ ಮಗಳ ದೇಹವು ಪಾಳು ಬಿದ್ದ ಕಟ್ಟಡದಲ್ಲಿ ಪತ್ತೆಯಾಗಿದೆ. ಘಟನೆ ನಂತರ ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೊಳಂಕಿ ಹಲ್ಲೆ ಮಾಡಿದ್ದರ ಕುರಿತು ಮಕ್ಕಳ ತಲೆಗೆ ಗಾಯವಾಗಿರುವ ಗುರುತುಗಳಿವೆ. ಪ್ರಕರಣದ ಕುರಿತು ಎಫ್‍ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.