ಲಕ್ನೋ: ಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಪತ್ನಿ ತನ್ನ 5 ವರ್ಷದ ಮಗಳನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಭರತ್ ಸುಬ್ರಮಣ್ಯಂ(33), ಶಿವರಂಜಿನಿ(31) ಹಾಗೂ ಜೈಶ್ರೀತಾ(5) ಮೃತಪಟ್ಟವರು. ಮೂಲತಃ ಚೆನ್ನೈನವರಾಗಿರುವ ಭರತ್ ಕಠ್ಮಂಡುಯಿಂದ ನೋಯ್ಡಾಗೆ ಶಿಫ್ಟ್ ಆಗಿದ್ದರು. ಭರತ್ ತಮ್ಮ ಪತ್ನಿ ಶಿವರಂಜಿನಿ, ಮಗಳು ಜೈಶ್ರೀತಾ ಹಾಗೂ ಸಹೋದರ ಕಾರ್ತಿಕ್ ಜೊತೆ ಜೆಪಿ ಪೆವಿಲಿಯನ್ ಕೋರ್ಟ್ ಬಳಿ ವಾಸಿಸುತ್ತಿದ್ದರು. ಭರತ್ ಟೀ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕ್ ಕೋಚಿಂಗ್ ನೀಡುವ ಕೆಲಸ ಮಾಡುತ್ತಿದ್ದರು.
ಶುಕ್ರವಾರ ಬೆಳಗ್ಗೆ ಸುಮಾರು 11.30ಕ್ಕೆ ಭರತ್ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ವಿಷಯವನ್ನು ಪೊಲೀಸರು ಶಿವರಂಜಿನಿಗೆ ತಿಳಿಸಿದರು. ಶಿವರಂಜಿನಿ ತನ್ನ ಮೈದುನ ಜೊತೆ ರಾಮ್‍ಮನೋಹರ್ ಲೋಹಿಯಾ ಆಸ್ಪತ್ರೆಗೆ ತಲುಪಿದ್ದಳು. ಅಲ್ಲಿಂದ ಹಿಂದಿರುಗಿದ ನಂತರ ತನ್ನ 5 ವರ್ಷದ ಮಗಳನ್ನು ಕೊಲೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರು ಶವ ಫ್ಲ್ಯಾಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಉಸ್ತುವಾರಿ ಭುವನೇಶ್ ಕುಮಾರ್ ಅವರು, ಭರತ್ ಹಾಗೂ ಶಿವರಂಜಿನಿ ಕಳೆದ 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಭರತ್ ಗೋಲ್ಡನ್ ಟಿಪ್ಸ್ ಟೀ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ಮೊದಲು ಭರತ್ ನೇಪಾಳದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.