– ಮಗುವನ್ನು ಹುಡುಕಿಕೊಂಡ ಬಂದ ತಂದೆಗೆ ತರಾಟೆ
ಮೈಸೂರು: ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಇದೆ. ಅದೇ ರೀತಿ ಮೈಸೂರಿನಲ್ಲಿ ನಡೆದ ಒಂದು ಘಟನೆಯಲ್ಲಿ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಮೋರಿ ಪಾಲಾಗಿದೆ.
ಪತಿ-ಪತ್ನಿ ಜಗಳ ಮಗುವನ್ನು ಮೋರಿಗೆ ಬಿಸಾಡೋ ಹಂತಕ್ಕೆ ಬಂದಿದೆ. 6 ತಿಂಗಳ ಹೆಣ್ಣು ಮಗುವನ್ನು ಹೆತ್ತ ತಾಯಿಯೇ ಮೋರಿಗೆ ಹಾಕಿದ್ದಾಳೆ. ಒಂದು ದಿನದ ನಂತರ ಇದು ನನ್ನ ಮಗು ಕೊಡಿ ಎಂದು ಬಂದ ತಂದೆಗೆ ಸ್ಥಳೀಯರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರೇಣುಕಾರಾಧ್ಯ ಮತ್ತು ಪತ್ನಿ ರಾಣಿ ಮನೆಯಲ್ಲಿ ಜಗಳವಾಡಿಕೊಂಡಿದ್ದಾರೆ. ಹೆಣ್ಣು ಮಗು ಆಗಿದೆ ಎಂಬ ಕೋಪದಲ್ಲಿ ಜಗಳ ಜೋರಾಗಿದೆ. ಇದೇ ಕೋಪದಲ್ಲಿದ್ದ ಹೆಂಡತಿ, ಮಗುವನ್ನ ತಂದು ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ದೊಡ್ಡ ಮೋರಿಗೆ ಬಿಸಾಡಿದ್ದಾಳೆ. ಈ ವೇಳೆ ಮೋರಿಯಲ್ಲಿ ಬಿದ್ದ ಪುಟ್ಟ ಕಂದಮ್ಮನ ಕಾಲಿಗೆ ಗಾಯವಾಗಿ, ಮಗು ಚಿರಾಡಿದೆ. ಈ ವೇಳೆ ಮಗುವನ್ನು ಕಂಡ ಸ್ಥಳೀಯರು ಮೋರಿಗೆ ಇಳಿದು ಮಗುವನ್ನು ಮೇಲೆತ್ತಿ, ಸ್ನಾನ ಮಾಡಿಸಿದ್ದಾರೆ. ಮಗು ಯಾರದು ಎಂದು ಕೇಳಿದ್ರು, ಅಕ್ಕಪಕ್ಕದವರಿಗೆ ವಿಚಾರಿಸಿದ್ರು ಯಾರಿಗು ಗೊತ್ತಾಗಿಲ್ಲ. ಈ ವೇಳೆ ವಿದ್ಯಾರಣ್ಯಪುರಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಬಳಿಕ ಪೊಲೀಸರ ಜೊತೆಯಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಕ್ಕಳ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.
ಮಗುವನ್ನು ಮೋರಿಗೆ ಹಾಕಿದ ತಾಯಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳು ಎನ್ನಲಾಗಿದೆ. ಹೀಗಂತಾ ಪತಿ ನನ್ನ ಮಗು ಬೇಕೆಂದು ಬಂದ ವೇಳೆ ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುವ ವೇಳೆ ತಿಳಿಸಿದ್ದಾನೆ. ಮಾತ್ರವಲ್ಲದೆ, ಕೆ.ಆರ್ ಆಸ್ಪತ್ರೆಯಲ್ಲಿ ಪತಿ-ಪತ್ನಿಗೆ ಕೌನ್ಸಿಲ್ ಕೊಡಲಾಗುತ್ತಿದ್ದು, ಮಾನಸಿಕೆ ಖಿನ್ನತೆಯಿಂದ ಮಗುವಿನ ತಾಯಿ ಹೀಗೆ ಮಾಡಿದ್ದಾಳೆ ಎಂಬುದು ಪತಿಯ ವಾದ. ಆದರೆ ಮಗುವನ್ನು ಕಾಪಾಡಿದವರು ಪೋಷಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಗೆ ತಕ್ಕಂತೆ ಮೈಸೂರಿನಲ್ಲಿ ಘಟನೆ ನಡೆದಿದ್ದು, ಪೋಷಕರಿಬ್ಬರ ವಿರುದ್ಧವೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಆದರೆ ಇದೀಗ ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪತಿ-ಪತ್ನಿಯ ಕೌನ್ಸಿಲ್ ರಿಪೋರ್ಟ್ ಬಂದ ಬಳಿಕ ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.