ದಾವಣಗೆರೆ: ಕುಡಿಯಲು ಹಣ ನೀಡಲಿಲ್ಲ ಎಂದು ಕೋಪಗೊಂಡ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ವಿಜಯನಗರ ಬಡಾವಣೆಯ ಉಷಾ (38) ಕೊಲೆಯಾದ ಮಹಿಳೆ. ಕೊಲೆ ಆರೋಪದ ಮೇಲೆ ಉಷಾಳ ಪತಿ ಜಯಪ್ಪ (38)ನನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಷಾ ಹಾಗೂ ಜಯಪ್ಪ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಕುಡಿತ ಚಟಕ್ಕೆ ದಾಸನಾಗಿದ್ದ ಜಯಪ್ಪ ಪ್ರತಿ ದಿನ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೇ ಪತ್ನಿಯ ಶೀಲದ ಬಗ್ಗೆಯೂ ಸಂಶಯಪಡುತ್ತಿದ್ದನು ಎನ್ನಲಾಗಿದೆ.
ಪತಿ ಕುಡಿತ ಚಟಕ್ಕೆ ದಾಸನಾಗಿದ್ದ ಕಾರಣ ಉಷಾ ದುಡಿದು ಮಕ್ಕಳನ್ನು ಸಾಕುತ್ತಿದ್ದರು. ಕಳೆದ ರಾತ್ರಿ ಕುಡಿದು ಬಂದ ಜಯಪ್ಪ ಪತ್ನಿ ಉಷಾ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಉಷಾ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಉಷಾ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.