ಕಲಬುರಗಿ: ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದಕ್ಕೆ ಕೋಪಗೊಂಡ ಪತಿ ಕುದಿಯುವ ಅಡುಗೆ ಎಣ್ಣೆಯನ್ನು ಪತ್ನಿಯ ಮುಖಕ್ಕೆ ಎರಚಿದ್ದಲ್ಲದೇ, ಮೈ ಮೇಲೆ ಸೀಮೆ ಎಣ್ಣೆ ಸುರಿದು ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ನಡೆದಿದೆ.
ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದ್ದಕ್ಕೆ ಪತಿ ಭೀಮಾಶಂಕರ್ ನರಸಕ್ಕಿ ಪ್ರಿಯಾಂಕಾಳಿಗೆ(25) ಬೆಂಕಿ ಹಚ್ಚಿದ್ದಾನೆ. ಗಂಡನಿಂದ ಬೆಂಕಿಯಲ್ಲಿ ಬೆಂದು ಸಾವು ಬದುಕಿನ ನಡುವೆ ಪ್ರಿಯಾಂಕಾ ಈಗ ಹೋರಾಡುತ್ತಿದ್ದು, ಶೇ.50ಕ್ಕಿಂತ ಹೆಚ್ಚು ಸುಟ್ಟ ಗಾಯಗೊಂಡಿರುವ ಆಕೆಯನ್ನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Advertisement
Advertisement
ಮೂರು ವರ್ಷದ ಹಿಂದೆ ಪ್ರಿಯಾಂಕಾ ಮತ್ತು ಭೀಮಾಶಂಕರ್ ಮದುವೆ ನಡೆದಿದ್ದು, ಇವರ ದಾಂಪತ್ಯ ಜೀವನಕ್ಕೆ ಹದಿನೆಂಟು ತಿಂಗಳ ಮುದ್ದಾದ ಹೆಣ್ಣು ಮಗುವೂ ಸಾಕ್ಷಿಯಾಗಿದೆ. ಆದರೆ ಮದುವೆಯಾದ ಆರಂಭದಿಂದಲೂ ಹೆಂಡತಿಗೆ ಕಿರುಕುಳ ನೀಡುತ್ತಲೇ ಬಂದಿರುವ ಭೀಮಾಶಂಕರ್ ಹಲವು ಬಾರಿ ಮನಬಂದಂತೆ ಥಳಿಸಿದ್ದ.
Advertisement
ಆದರೆ ಮಂಗಳವಾರ ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದ್ದಳು ಅನ್ನುವ ಕಾರಣಕ್ಕೆ ಒಲೆಯ ಮೇಲೆ ಕುದಿಯುತ್ತಿರುವ ಎಣ್ಣೆಯ ಪಾತ್ರೆಯನ್ನು ಮುಖಕ್ಕೆ ಎಸೆದಿದ್ದಾನೆ. ಅಲ್ಲದೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯ ಆರೋಪಿ ಭೀಮಾಶಂಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.