ಕೋಲಾರ: ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
27 ವರ್ಷದ ಸಂಧ್ಯಾ ಕೊಲೆಯಾದ ಮಹಿಳೆ. ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕತ್ತು ಕುಯ್ದು ಕೊಲೆ ಮಾಡಿರುವ ಆರೋಪಿ ಪತಿ ವಂಶಿ ತಲೆಮರೆಸಿಕೊಂಡಿದ್ದಾನೆ.
Advertisement
ಸಂಧ್ಯಾ ಮತ್ತು ವಂಶಿ ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಪೋಷಕರಿಂದ ದೂರ ಇದ್ದರು. ಇಬ್ಬರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಂಶಿ ಸಂಧ್ಯಾಳ ಶೀಲ ಶಂಕಿಸಿ ಪ್ರತಿದಿನ ಜಗಳ ಮಾಡುತ್ತಿದ್ದ. ಇವರಿಬ್ಬರ ಜಗಳ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವೇಳೆ ಗ್ರಾಮಸ್ಥರು, ಪೊಲೀಸರು ಸೇರಿ ಬುದ್ಧಿವಾದ ಹೇಳಿದ್ದರು. ನಂತರ ಇಬ್ಬರೂ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದರು.
Advertisement
Advertisement
ಪೊಲೀಸರು ಮತ್ತು ಗ್ರಾಮಸ್ಥರು ಹೇಳಿದ ಮೇಲೆ ದಂಪತಿ ಬಂಗಾರಪೇಟೆಯಲ್ಲಿಯೇ ಒಂದೇ ಶಾಲೆಗೆ ಶಿಕ್ಷಕರಾಗಿ ಹೋಗುತ್ತಿದ್ದರು. ಕೆಲವು ದಿನಗಳ ಕಾಲ ಇಬ್ಬರ ನಡುವಿನ ಬಾಂಧವ್ಯ ಸುಧಾರಿಸಿತ್ತು. ಆದರೆ ವಂಶಿ ಇತ್ತೀಚೆಗೆ ಮತ್ತೆ ಬೆಂಗಳೂರಿಗೆ ಹೋಗುವಾಗ ಯಾರ ಜೊತೆಯೋ ಸಂಬಂಧ ಇದೆ ಎಂದು ಜಗಳ ಪ್ರಾರಂಭಿಸಿದ್ದಾನೆ. ಶುಕ್ರವಾರ ರಾತ್ರಿ ಇದೇ ವಿಚಾರಕ್ಕೆ ವಾದ ವಿವಾದ ನಡೆದಿದ್ದು, ಕೊನೆಗೆ ವಂಶಿ ಕೋಪಗೊಂಡು ಸಂಧ್ಯಾಳ ಕತ್ತು ಕುಯ್ದು ಕೊಂದು ಬಿಟ್ಟಿದ್ದಾನೆ.
Advertisement
ಇಂದು ಮುಂಜಾನೆ ನೆರೆಹೊರೆಯವರು ಏನೂ ಶಬ್ದ ಇಲ್ಲ ಎಂದು ಅನುಮಾನಿಸಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ವಿಷಯ ತಿಳಿದ ಬಂಗಾರಪೇಟೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.