ಹೈದರಾಬಾದ್: ಪಾಪಿ ಪತಿಯೊಬ್ಬ ಗರ್ಭಿಣಿ ಎಂದು ನೋಡದೆ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಕಡಪದಲ್ಲಿ ನಡೆದಿದೆ.
ಚಾಂದಿನಿ ಮೃತ ಮಹಿಳೆ. ಕಡಪದ ಅಲ್ಲೂರಿ ಸೀತಾರಾಮರಾಜುನಗರದ ನಿವಾಸಿ ಚಾಂದಿನಿ ಅದೇ ನಗರದ ಮಾರುತಿ ಜೊತೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ ನಾಲ್ಕು ವರ್ಷದ ಮಗನಿದ್ದು, ಮತ್ತೆ ಚಾಂದಿನಿ ಗರ್ಭಿಣಿಯಾಗಿದ್ದಳು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಎಂದು ಚಾಂದಿನಿ ಕುಟುಂಬಸ್ಥರು ಮಾರುತಿಗೆ 4 ಲಕ್ಷ ರೂ. ಕೊಟ್ಟಿದ್ದರು. ಆದರೂ ಮದುವೆಯಾಗಿನಿಂದಲೂ ಮಾರುತಿ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನು.
Advertisement
Advertisement
ಆರೋಪಿ ಮಾರುತಿ ಪ್ರತಿದಿನ ಸ್ಥಳೀಯ ಅಂಗಡಿಯಲ್ಲಿ ಧೂಮಪಾನ ಮಾಡುತ್ತಿದ್ದು, ವರದಕ್ಷಿಣೆಗಾಗಿ ನನ್ನ ಮಗಳಿಗೆ ಚಿತ್ರಹಿಂಸೆ ಕೊಡುತ್ತಿದ್ದನು. ಕೆಲವು ದಿನಗಳ ಹಿಂದೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಆದರೆ ಇದಕ್ಕೆ ನನ್ನ ಮಗಳು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಮಾರುತಿ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟಿದ್ದಾನೆ ಎಂದು ಮೃತ ಚಾಂದಿನಿಯ ಪೋಷಕರು ಆರೋಪಿಸಿದ್ದಾರೆ.
Advertisement
ಶನಿವಾರ ರಾತ್ರಿ ಇದೇ ವಿಚಾರಕ್ಕೆ ಮತ್ತೆ ಜಗಳ ಮಾಡಿ ಪತ್ನಿಯ ಕೈಯನ್ನು ಮುರಿದು, ಕತ್ತಿಯಿಂದ ಹಲ್ಲೆ ಮಾಡಿದ್ದನು. ಪರಿಣಾಮ ಚಾಂದಿನಿ ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ಇದರಿಂದ ಭಯಗೊಂಡು ಚಾಂದಿನಿಯ ಶವವನ್ನು ಬಿಟ್ಟು ಅತ್ತೆ, ಮಾವ, ಮಾರುತಿ ಮನೆಯಿಂದ ಪರಾರಿಯಾಗಿದ್ದಾರೆ.
Advertisement
ಮರುದಿನ ಚಾಂದಿನಿ ಕುಟುಂಬಸ್ಥರು ಮನೆಗೆ ಬಂದಿದ್ದಾರೆ. ಆದರೆ ಬಾಗಿಲು ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಹೋಗಿ ನೋಡಿದಾಗ ಚಾಂದಿನಿಯ ಶವ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಚಾಂದಿನಿಯ ಮೃತದೇವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.