ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿ ಪತ್ನಿಯ ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಓರಿಸ್ಸಾ ಮೂಲದ ಮಾಲತಿ(38) ಕೊಲೆಗೀಡಾದ ಮಹಿಳೆ. ಆರೋಪಿ ಬಾಪಿ ಮತ್ತು ಮಾಲತಿ ಮೂಲತಃ ಓರಿಸ್ಸಾ ಮೂಲದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಈ ದಂಪತಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
ಈ ದಂಪತಿ ಕಳೆದ 9 ತಿಂಗಳ ಹಿಂದೆ ಕಾವೇರಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆರೋಪಿ ಪತಿ ಬಾಪಿ ಕೈ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಮಾಲತಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದ್ದರು.
ಇತ್ತೀಚೆಗೆ ಆರೋಪಿ ಬಾಪಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿದ್ದಾನೆ. ಇದೇ ಕಾರಣಕ್ಕೆ ಮನೆ ಮಾಲೀಕರು ಮನೆ ಖಾಲಿ ಮಾಡಲು ಸೂಚಿಸಿದ್ದರು. ಅದರಂತೆ ಮಂಗಳವಾರ ಮಧ್ಯಾಹ್ನ ಪತಿ-ಪತ್ನಿ ಇಬ್ಬರೂ ಚರ್ಚೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಪತ್ನಿ ಮಾಲತಿಯನ್ನು ಬಾಪಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.
ಬಳಿಕ ಆಕೆ ಮಲಗಿದ್ದಾರೆ ಎನ್ನುವಂತೆ ಆಕೆಯ ಮೇಲೆ ಬೆಡ್ ಶೀಟ್ ಹೊದಿಸಿ, ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಸೋಮವಾರ ರಾತ್ರಿ ಸ್ಥಳೀಯ ವ್ಯಕ್ತಿ ಆರೋಪಿ ಬಾಪಿ ಮನೆ ಬಳಿ ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಘಟನೆ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಶೋಧಕಾರ್ಯ ಮುಂದುವರೆದಿದೆ.