ಬಳ್ಳಾರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿ ದೇಹವನ್ನು 15 ಪೀಸ್ ಮಾಡಿ ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಭಾರತಿ (24) ಪತಿಯಿಂದ ಬರ್ಬರವಾಗಿ ಕೊಲೆಯಾದ ದುರ್ದೈವಿ. ಈ ಘಟನೆ ಫೆಬ್ರವರಿ 19 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಪತಿ ಚಂದ್ರಹಾಸನನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಕಾರು ಕೊಡಿಸುವಂತೆ ಚಂದ್ರಹಾಸ ಜೊತೆ ಪತ್ನಿ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಮತ್ತೆ ಜಗಳ ಪ್ರಾರಂಭವಾಗಿದ್ದು, ಕೋಪಗೊಂಡ ಪತಿ ಚಂದ್ರಹಾಸ ಹೆಂಡತಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದಾನೆ. ಬಿದ್ದ ಏಟಿಗೆ ತಲೆ ತಿರುಗಿ ಬಿದ್ದ ಭಾರತಿ ಎಚ್ಚರವಾದರೆ ವಿಷಯವನ್ನ ರಾದ್ದಾಂತ ಮಾಡುತ್ತಾಳೆ ಎಂದು ಚಂದ್ರಹಾಸ ಹೆಂಡತಿಯ ಕತ್ತು ಹಿಸುಕಿ ಕೊಲೆಮಾಡಿ ನಂತರ ದೇಹವನ್ನು ಹದಿನೈದು ತುಂಡುಗಳನ್ನಾಗಿ ಮಾಡಿ, ನಾಲ್ಕು ಬ್ಯಾಗ್ ಗಳಲ್ಲಿ ತುಂಬಿ ಹೊಸಪೇಟೆ ನಗರದ ರೈಲ್ವೆ ಸ್ಟೇಷನ್ ರಸ್ತೆಯ ಎಲ್‍ಎಲ್‍ಸಿ ಕಾಲುವೆಗೆ ಎಸೆದಿದ್ದಾನೆ.
ಮಂಗಳೂರಿನಿಂದ ವಲಸೆ ಬಂದ ಚಂದ್ರಹಾಸ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತಿದ್ದನು. ಅದೇ ಬಟ್ಟೆ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಹಂಪಿಯ ಎಂ.ಪಿ.ಪ್ರಕಾಶ್ ನಗರದ ಭಾರತಿಯನ್ನ ಪ್ರೀತಿಸಿ ಮದುವೆಯಾಗಿದ್ದನು. ನಂತರ ತಾನೇ ಒಂದು ಬಟ್ಟೆ ಅಂಗಡಿ ಪ್ರಾರಂಭಿಸಿ ವ್ಯಾಪಾರ ಕೂಡ ಆರಂಭಿಸಿದ್ದನು. ಹಾಗಾಗಿ ನಗರದ ಸುಣ್ಣದ ಬಟ್ಟಿ ಏರಿಯಾದಲ್ಲಿ ಮನೆ ಬಾಡಿಗೆ ಮಾಡಿ ದಂಪತಿ ವಾಸವಾಗಿತ್ತು.
ಕೊಲೆಯ ಬಳಿಕ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ತವರು ಮನೆಯವರಿಗೂ ಹೇಳಿ ಪತ್ನಿಯನ್ನು ನಾವೇ ಹುಡುಕೋಣ ಪೊಲೀಸ್ ಠಾಣೆಗೆ ದೂರು ಕೊಡುವುದು ಬೇಡ. ದೂರು ಕೊಟ್ಟರೆ ನಿಮ್ಮ ಮತ್ತು ನನ್ನ ಮರ್ಯಾದೆ ಹರಾಜಾಗುತ್ತೆ ಎಂದು ಹೇಳಿ ಯುವತಿಯ ಮನೆಯವರನ್ನು ಚಂದ್ರಹಾಸ ನಂಬಿಸಿದ್ದನು.
ಕೆಲ ದಿನಗಳವರೆಗೆ ಪತ್ನಿಯನ್ನು ಹುಡುಕಿದಂತೆ ನಟಿಸಿ, ಬಳಿಕ ತಾನೂ ಪರಾರಿಯಾಗಿದ್ದನು. ಕೊನೆಗೆ ಅನುಮಾನಗೊಂಡ ಮೃತ ಮಹಿಳೆಯ ಅಣ್ಣ ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡರು. ಕಣ್ಮರೆಯಾಗಿದ್ದ ಚಂದ್ರಹಾಸನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.