ಮೈಸೂರು: ಜಿಲ್ಲಾಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಣಕ್ಕಾಗಿ ಪತಿಯೇ ಪತ್ನಿಗೆ ಕಿರುಕುಳ ಕೊಟ್ಟು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ಶುಕ್ರವಾರದಂದು ನಡೆದಿದೆ.
ಕಾವ್ಯಾರಾಣಿ(28) ಮೃತ ದುರ್ದೈವಿ. ಎರಡು ವರ್ಷಗಳ ಹಿಂದೆ ನಾಟನಹಳ್ಳಿಯ ಸಂತೋಷ್ ಹಾಗೂ ಮಿರ್ಲೆ ಗ್ರಾಮದ ಕಾವ್ಯಾರಾಣಿ ಮದುವೆಯಾಗಿದ್ದರು. ಸಂತೋಷ್ ಹಲವು ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದನು. ಹಾಗೆಯೇ ಮುಂಬರುವ ಜಿಲ್ಲಾಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದನು. ಆದ್ದರಿಂದ ಚುನಾವಣೆ ಖರ್ಚಿಗೆ ತವರು ಮನೆಯಿಂದ 15 ಲಕ್ಷ ರೂ. ತರುವಂತೆ ಕಾವ್ಯಾರಾಣಿಗೆ ಒತ್ತಡ ಹೇರಿ ಕೆಲವು ದಿನಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಸಂತೋಷ್ ಹಾಗೂ ಅವನ ಕುಟುಂಬದವರು ಕಿರುಕುಳ ಕೊಡುತ್ತಿದ್ದರು.
Advertisement
Advertisement
ಹಣ ತರಲು ಕಾವ್ಯಾರಾಣಿ ನಿರಾಕರಿಸಿದ್ದಕ್ಕೆ ಶುಕ್ರವಾರದಂದು ಪತಿ ಸಂತೋಷ್ ಹಾಗೂ ಕುಟುಂಬದವರು ಆಕೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಸುಟ್ಟಗಾಯಗಳಿಂದ ನರಳುತ್ತಿದ್ದ ಕಾವ್ಯಾರಾಣಿಯನ್ನು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.
Advertisement
Advertisement
ಸಾವಿಗೂ ಮುನ್ನ ಗಂಡ ಸಂತೋಷ್, ಅತ್ತೆ ಶಾರದಮ್ಮ, ನಾದಿನಿ ಸೌಮ್ಯ ಹಾಗೂ ಸೌಮ್ಯನ ಗಂಡ ಚಂದ್ರಶೇಖರ್ ಬೆಂಕಿ ಹಚ್ಚಿದ್ದಾಗಿ ಮಹಿಳೆ ಹೇಳಿಕೆ ನೀಡಿ ಜೀವಬಿಟ್ಟಿದ್ದಾರೆ.
ಘಟನೆ ಕುರಿತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv