Bagalkot

ನಾದಿನಿ ಮೇಲಿನ ಆಸೆಗಾಗಿ ಪತ್ನಿಯನ್ನು ಕೊಂದು ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ!

Published

on

Share this

ಬಾಗಲಕೋಟೆ: ಪತ್ನಿಯ ತಂಗಿಯ ಮೇಲಿನ ಆಸೆಯಿಂದ ಪತ್ನಿಯನ್ನು ಕೊಂದು ಬಳಿಕ ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ್ದ ಪತಿಯನ್ನು ಬಾಗಲಕೋಟೆಯ ಲೋಕಪುರ ಪೊಲೀಸರು ಬಂಧಿಸಿದ್ದಾರೆ.

ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ಚಂದ್ರ ಕಿಲಬನೂರು(30) ಎಂಬಾತ ಪತ್ನಿ ರತ್ನವ್ವ(25)ಳನ್ನು ಫೆ. 14ರಂದು ಹತ್ಯೆ ಮಾಡಿದ್ದ. ಹತ್ಯೆ ಮಾಡಿದ ಬಳಿಕ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರಲ್ಲಿ ಹೇಳಿದ್ದ. ಆದರೆ ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಹಿಡಿದು ರತ್ನವ್ವ ಕೊಲೆಯಾಗಿರುವ ಫಲಿತಾಂಶ ಪ್ರಕಟಗೊಂಡಿತ್ತು.

ಪೊಲೀಸರು ಈ ವರದಿ ಆಧಾರದಲ್ಲಿ ಪತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಚಂದ್ರ ನಾನೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಹಾವು ಖರೀದಿಸಿದ್ದ: ಪತ್ನಿಯ ಕೊಲೆಗೆ ಮೊದಲೇ ಸ್ಕೆಚ್ ಹಾಕಿದ್ದ ಚಂದ್ರ ಹತ್ಯೆ ಮಾಡಿದರೂ ತಾನೂ ಸಿಕ್ಕಿಬೀಳಬಾರದು ಎನ್ನುವ ಕಾರಣಕ್ಕೆ ಮೂರು ತಿಂಗಳ ಹಿಂದೆ 5 ಸಾವಿರ ರೂ. ಹಣವನ್ನು ನೀಡಿ ಹಾವನ್ನು ಖರೀದಿಸಿದ್ದ. ಫೆ.14ರಂದು ಪತ್ನಿಯನ್ನು ತೋಟದಲ್ಲಿ  ಚಂದ್ರ ಹತ್ಯೆ ಮಾಡಿದ್ದಾನೆ. ಮನೆಗೆ ಸಂಬಂಧಿಕರು ಬಂದಾಗ ಹಾವು ಕಚ್ಚಿ ಪತ್ನಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ.

ಹಲವು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಕೊಲೆಗಳು ನಡೆಯದ ಕಾರಣ ಗ್ರಾಮಸ್ಥರು ಹಾವು ಕಚ್ಚಿ ರತ್ನವ್ವ ಸಾವನ್ನಪ್ಪಿದ್ದಾಳೆ ಎಂದೇ ನಂಬಿದ್ದರು. ಆದರೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಇದು ಹತ್ಯೆಯಾಗಿರುವ ಶಂಕೆಯಿದೆ ಎಂದು ಹೇಳಿ ಗ್ರಾಮಸ್ಥರಲ್ಲಿ ಶವ ಪರೀಕ್ಷೆ ನಡೆಸುವಂತೆ ಹೇಳಿದ್ದಾರೆ. ಹೀಗಾಗಿ ಶವ ಪರೀಕ್ಷೆ ನಡೆಸಿದಾಗ ಸತ್ಯ ಹೊರ ಬಂದಿದೆ.

8 ವರ್ಷಗಳ ಹಿಂದೆ ರತ್ನವ್ವಳನ್ನು ಚಂದ್ರ ಮದುವೆಯಾಗಿ ಮಾವನ ಮನೆಯಲ್ಲೇ ನೆಲೆಸಿದ್ದ. ಈ ದಂಪತಿಗೆ ಮೂವರು ಮಕ್ಕಳು ಇದ್ದು, ಪೊಲೀಸ್ ವಿಚಾರಣೆ ವೇಳೆ ಆಸ್ತಿ ಆಸೆಗಾಗಿ ಪತ್ನಿಯನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.

Click to comment

Leave a Reply

Your email address will not be published. Required fields are marked *

Advertisement
Advertisement