ಗಂಡು ಮಗುವಿನ ವ್ಯಾಮೋಹಕ್ಕೆ ತಲೆಕೆಟ್ಟು ಪತ್ನಿಯ ಬರ್ಬರ ಹತ್ಯೆ!

Public TV
2 Min Read
klr murder

ಕೋಲಾರ: ಗಂಡು ಮಗುವಿನ ಮೇಲಿನ ವ್ಯಾಮೋಹದಿಂದ ತಲೆಕೆಟ್ಟು ಪತಿಯೊಬ್ಬ ತನ್ನ ಹೆಂಡತಿಯನ್ನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಾಲೂರು ತಾಲೂಕು ದೊಡ್ಡಕಡತೂರು ಗ್ರಾಮದಲ್ಲಿ ನಡೆದಿದೆ.

ದೊಡ್ಡಕಡತೂರು ಗ್ರಾಮದ ವಿಜಯ್ ಕುಮಾರ್ ಪತ್ನಿ ಮಂಜುಳಾರನ್ನು ಕೊಲೆ ಮಾಡಿದ್ದು, ಈಗ ಮಾಲೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಏನಿದು ಘಟನೆ?
ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವಿಜಯ ಕುಮಾರ್ 11 ವರ್ಷಗಳ ಹಿಂದೆ ಪಕ್ಕದೂರಿನ ತನ್ನ ಸಂಬಂಧಿಕರ ಮನೆ ಹುಡುಗಿ ಮಂಜುಳಾರನ್ನು ಮದುವೆಯಾಗಿದ್ದ. ಸಣ್ಣ ಪುಟ್ಟ ಮನೆಯ ಜಗಳಗಳನ್ನು ಹೊರತು ಪಡಿಸಿದರೆ ಸಂಸಾರ ಚೆನ್ನಾಗಿ ನಡೆದುಕೊಂಡು ಹೋಗುತಿತ್ತು. ಆದರೆ ಮದುವೆಯಾದ ಮೇಲೆ ದಂಪತಿಗೆ ಮೂರು ಹೆಣ್ಣು ಮಕ್ಕಳು ಹುಟ್ಟಿದ್ದರು.

ಇದರಿಂದ ಬೇಸರಗೊಂಡಿದ್ದ ವಿಜಯಕುಮಾರ್ ತನಗೊಂದು ಗಂಡು ಮಗು ಬೇಕು ಎಂದು ಆಗಾಗ ಜಗಳ ಮಾಡುತ್ತಿದ್ದ. ಅಲ್ಲದೆ ಮಂಜುಳಾಗೆ ಚಿತ್ರ ಹಿಂಸೆ ಮಾಡುತ್ತಿದ್ದ. ತಲೆ ಕೆಟ್ಟವನಂತೆ ಆಡುತ್ತಿದ್ದ. ಜೊತೆಗೆ ಆಗಾಗ ಊರಿನಲ್ಲಿ ಮಚ್ಚುಹಿಡಿದುಕೊಂಡು ಓಡಾಡುತ್ತಿದ್ದ. ಈ ಕಾರಣಕ್ಕೆ ಈತನನ್ನು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ಇಷ್ಟೆಲ್ಲ ಕಿತಾಪತಿ ಮಾಡುತ್ತಿದ್ದ ವಿಜಯ್ ಕುಮಾರ್ ಶುಕ್ರವಾರ ಮಧ್ಯಾಹ್ನ ಏಕಾಏಕಿ ತನ್ನ ಹೆಂಡತಿಯ ಮೇಲೆ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಆಕೆಯ ತಲೆ, ದೇಹದ ಮೇಲೆ ಸಿಕ್ಕ ಸಿಕ್ಕ ಕಡೆ ಕತ್ತರಿಸಿದ್ದಾನೆ. ಅಲ್ಲೇ ಇದ್ದ ತಾಯಿ ವೆಂಕಟಮ್ಮ ಕೂಗಿಕೊಂಡಿದ್ದರೂ ಬಿಡದೇ, ಅಕ್ಕ ಪಕ್ಕದ ಮನೆಯವರು ಬಿಡಿಸಲು ಬಂದರೂ ಅವರ ಮಾತಿಗೆ ಬೆಲೆ ಕೊಡದೇ ಹೆಂಡತಿಯ ದೇಹದ ಮೇಲೆ ಮಚ್ಚು ಬೀಸಿದ್ದಾನೆ.

ಮಚ್ಚಿನಿಂದ ಹಲ್ಲೆಗೊಳಗಾದ ಮಂಜುಳಾರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸೇರಿಸಲು ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ವಿಜಯ್ ಕುಮಾರ್‍ನನ್ನು ಬಂಧಿಸಿದ ಬಳಿಕ ಮಾಲೂರು ಪೊಲೀಸರು ಯಾಕೆ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ಯಾ ಎಂದು ಪ್ರಶ್ನಿಸಿದ್ದಕ್ಕೆ, ತನ್ನ ಆಸ್ತಿ ಪಾಸ್ತಿ, ವಂಶದ ಹೆಸರನ್ನು ಹೇಳಲು ಒಂದು ಗಂಡು ಮಗು ಬೇಕಿತ್ತು. ನನಗೆ ಮೂರು ಜನ ಹೆಣ್ಣು ಮಕ್ಕಳೇ ಆಗಿದ್ದಾರೆ. ಈ ಕಾರಣಕ್ಕೆ ತನ್ನ ಹೆಂಡತಿಯನ್ನು ಹತ್ಯೆ ಮಾಡಿರುವುದಾಗಿ ಉತ್ತರಿಸಿದ್ದಾನೆ.

ಗಂಡು ಮಗುವಿನ ವ್ಯಾಮೋಹ ಹಾಗೂ ಹುಚ್ಚಾಟದಿಂದ ತನ್ನ ಹೆಂಡತಿಯನ್ನು ಹತ್ಯೆ ಮಾಡಿದ್ದಲ್ಲದೆ ಪಾಪ ಅಮಾಯಕ ಮೂರು ಹೆಣ್ಣು ಮಕ್ಕಳು ಈಗ ತಾಯಿಯ ಪ್ರೀತಿಯೂ ಇಲ್ಲದೆ ತಂದೆಯ ಆಶ್ರಯವೂ ಇಲ್ಲದೇ ಅನಾಥವಾಗಿದ್ದಾರೆ.

kolar murder 2

kolar murder 3

kolar murder 4

Share This Article
Leave a Comment

Leave a Reply

Your email address will not be published. Required fields are marked *