Bellary
10 ವರ್ಷ ಪ್ರೀತಿಸಿ ಮದುವೆಯಾದ್ರು, ಆರೇ ತಿಂಗಳಿಗೆ ಹೆಂಡ್ತಿಯನ್ನ ಕೊಲೆಗೈದ!

ಬಳ್ಳಾರಿ: ಹತ್ತು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ರು. ಸುತ್ತಾಡಿ ಮದುವೆಯೂ ಆದ್ರು. ಆದ್ರೆ ಆರೇ ತಿಂಗಳಿಗೆ ಹೆಂಡತಿ ಹೆಣವಾಗಿರುವ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅರಳಿಹಳ್ಳಿ ತಾಂಡಾದಲ್ಲಿ ನಡೆದಿದೆ.
ಅಕ್ಕಪಕ್ಕದ ಮನೆಯವರಾಗಿದ್ದ ಅಕ್ಕಮ್ಮಬಾಯಿ ಮತ್ತು ಪೀರ್ಯಾನಾಯ್ಕ್ ಎಂಬವರು ಸುಮಾರು ಹತ್ತು ವರ್ಷಗಳಿಂದ ಪ್ರೀತಿ ಮಾಡಿದ್ದರು. ಆದರೆ ಸರ್ಕಾರಿ ಟೀಚರ್ ಕೆಲಸ ಸಿಕ್ಕಿದ್ದೆ ತಡ ಪೀರ್ಯಾನಾಯ್ಕ್ ಮದುವೆ ಆಗಲ್ಲ ಅಂತಾ ಹೇಳಿದ್ದ ಆದ್ರೂ ಹಠ ಮಾಡಿ ಅಕ್ಕಮ್ಮಬಾಯಿ ಮದುವೆ ಆಗಿದ್ದರು.
ಪೀರ್ಯಾನಾಯ್ಕ್ ಒಂದು ದಿನ ತನ್ನ ಹೆಂಡತಿಯನ್ನು ಸುತ್ತಾಡಿಲು ಕರೆದುಕೊಂಡು ಹೋಗಿದ್ದ. ಹೀಗೆ ಹೊರ ಹೋದಾಗ ಪತ್ನಿಯನ್ನು ಕೊಲೆಗೈದು ಸುಟ್ಟು ಹಾಕಿ ತುಂಗಭದ್ರಾ ನದಿಗೆ ಎಸೆದಿದ್ದ. ನಂತರ ಯಾರಿಗೂ ಗೊತ್ತಾಗದಂತೆ ಮನೆಗೆ ವಾಪಸ್ಸಾಗಿದ್ದ. ಅಷ್ಟೆ ಅಲ್ಲದೇ ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಅಂತ ಹಿರೇಹಡಗಲಿ ಠಾಣೆಯಲ್ಲಿ ದೂರು ಕೊಟ್ಟಿದ್ದ.
ಗಂಡನ ವರ್ತನೆ ಮೇಲೆ ಸಂಶಯ ಹೊಂದಿದ್ದ ಅಕ್ಕಮ್ಮಬಾಯಿ ತನ್ನ ಜೀವಕ್ಕೆ ಏನಾದ್ರೂ ಆದ್ರೆ ನನ್ನ ಪತಿ ಪೀರ್ಯಾನಾಯ್ಕ್ ಕಾರಣ ಎಂದು ಮೆನಯಲ್ಲಿ ಪತ್ರವೊಂದನ್ನು ಬರೆದಿಟ್ಟಿದ್ದರು. ಇದ್ರ ನಡುವೆ ಪೀರ್ಯಾನಾಯ್ಕ್ ಮತ್ತೊಂದು ಹೊಸ ನಾಟಕ ಶುರು ಮಾಡಿದ್ದ. ತನ್ನ ಕೋಣೆಯಲ್ಲಿ ರಕ್ತ ಚೆಲ್ಲಿ ತನ್ನ ಕೊಲೆಯಾಗಿದೆ ಅಂತಾ ಎಲ್ಲರನ್ನೂ ನಂಬಿಸಿ ಊರು ಬಿಟ್ಟು ಗೋವಾಕ್ಕೆ ಓಡಿಹೋಗಿದ್ದ. ಅಲ್ಲಿ ಬಾರ್‍ವೊಂದರಲ್ಲಿ ಕೆಲಸಕ್ಕೆ ಸೇರಿದ್ದ.
ಇತ್ತ ಅಕ್ಕಮ್ಮಬಾಯಿ ಮನೆಯವರು ಪೀರ್ಯಾನಾಯ್ಕ್ ವಿರುದ್ಧ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಹಗರಿಬೊಮ್ಮನಹಳ್ಳಿ ಠಾಣಾ ಪೊಲೀಸರು ಆರೋಪಿ ಪೀರ್ಯಾನಾಯ್ಕ್‍ನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಕೊಲೆ ಮಾಡಿ ಬಚಾವ್ ಆಗಲು ಯತ್ನಿಸಿದ್ದ ಪೀರ್ಯಾನಾಯ್ಕ್ ಈಗ ಜೈಲು ಸೇರಿದ್ದಾನೆ.
