ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿರಾಯ ಚಾಕುವಿನಿಂದ ಬರ್ಬರವಾಗಿ ಪತ್ನಿಯನ್ನ ಇರಿದು ಕೊಲೆಗೈದಂತಹ ಘಟನೆ ಬುಧವಾರ ತಡರಾತ್ರಿ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಪ್ರೀತಿ ಕೊಲೆಯಾದಾ ಮಹಿಳೆ. ಇಪ್ಪತ್ತು ವರ್ಷದ ಹಿಂದೆ ಪ್ರೀತಿ, ಇರೇನ್ ಎಂಬಾತನನ್ನ ಮದ್ವೆಯಾಗಿದ್ದರು. ಎಂಟು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ದಂಪತಿ ಮಧ್ಯೆ ಆಗಾಗ್ಗೆ ಗಲಾಟೆ ನಡೀತಿತ್ತು. ಪತ್ನಿಗೆ ಅನೈತಿಕ ಸಂಬಂಧ ಇರೋದಾಗಿ ಅನುಮಾನಿಸಿ ಪದೇ ಪದೇ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಬುಧವಾರ ಮದ್ಯಾಹ್ನ ಸುಮಾರು 2 ಗಂಟೆಗೆ ಪತ್ನಿ ಜೊತೆ ಇರೇನ್ ಗಲಾಟೆಗಿಳಿದಿದ್ದ, ಮಾತಿಗೆ ಮಾತು ಬೆಳೆದು ಇರೇನ್ ಚಾಕುವಿನಿಂದ ಪ್ರೀತಿಯ ಕತ್ತಿನ ಭಾಗಕ್ಕೆ ಎರಡು ಬಾರಿ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಪ್ರೀತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪ್ರೀತಿಯ 18 ವರ್ಷದ ಮಗ ಕಾಲೇಜು ಮುಗಿಸಿ ಮನೆಗೆ ಬರ್ತಿದ್ದಂತೆ ಕೊಲೆ ನಡೆದಿರೋದು ಗೊತ್ತಾಗಿದೆ. ಈ ವೇಳೆ ತಂದೆ ಇರೇನ್ ಜೊತೆ ಸೇರಿ ಮಗರಾಯ ತಾಯಿಯ ಹೆಣವನ್ನ ಬಾಡಿಗೆ ಮನೆಯಿಂದ ಮೂಟೆಕಟ್ಟಿ ಹೊತ್ತೊಯ್ಯಲು ಮುಂದಾಗಿದ್ದರು. ಇದನ್ನ ಗಮನಿಸಿದ ಅಕ್ಕಪಕ್ಕದ ಮನೆಯವರು ರಾಜಾಜಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯನಿರತರಾದ ಪೊಲೀಸರು ಇದೀಗ ಆರೋಪಿ ಇರೇನ್ ಹಾಗೂ ಆತನ ಮಗನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv