ಉಡುಪಿ: ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೇರೂರಿನಲ್ಲಿ ನಡೆದಿದೆ.
ಆರೋಪಿ ರಾಜು ಪೂಜಾರಿ ತನ್ನ ಎರಡನೇ ಹೆಂಡತಿ ಗಿರಿಜಾ ಅವರನ್ನು ಸಂಜೆ ಕುಡಿದ ಮತ್ತಿನಲ್ಲಿ ಕಡಿದು ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ವಿಪರೀತವಾಗಿ ಮನೆಯಲ್ಲಿದ್ದ ಕತ್ತಿಯಿಂದ ತಲೆಗೆ ಮತ್ತು ದೇಹದ ಇತರೆ ಭಾಗಗಳಿಗೆ ಕಡಿದಿದ್ದಾನೆ. ಮೃತ ದೇಹವನ್ನು ಹತ್ತಿರದ ತೋಡಿಗೆ ಹಾಕಲು ಎಳೆದುಕೊಂಡು ಹೋಗಿದ್ದಾನೆ.
ಇದನ್ನು ಕಂಡ ಅಳಿಯ ಆರೋಪಿಯನ್ನು ಊರಿನವರ ಸಹಾಯದಿಂದ ಹಿಡಿದು ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಿರಿಜಾರ ಮಗಳು ಮನೆಯಲ್ಲಿದ್ದು ಸೋಮವಾರ ಬೆಳಗ್ಗೆ ಮನೆಗೆ ಹೋಗಿ ಬೇಗ ಬರುತ್ತೇನೆ ಎಂದು ಹೋಗಿದ್ದಾರೆ. ವಾಪಸ್ಸು ಬರದೇ ಇರುವುದನ್ನು ಗಮನಿಸಿದ ಮಗಳ ಗಂಡ ಮನೆ ಸಮೀಪ ಬಂದಿದ್ದಾನೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯು ಕುಡಿತದ ಚಟವನ್ನು ಹೊಂದಿದ್ದು, ನಶೆಯಲ್ಲಿ ಹತ್ತಿರದವರ ಜೊತೆ ಯಾವಾಗಲೂ ಗಲಾಟೆ ಮಾಡುತ್ತಿದ್ದ. ಆರೋಪಿಯು 25 ವರ್ಷದ ಹಿಂದೆ ಮೊದಲನೆಯ ಹೆಂಡತಿಗೂ ಚೂರಿಯಿಂದ ಇರಿದಿದ್ದು ಅವಳು ಪ್ರಾಣಾಪಾಯದಿಂದ ಪಾರಾಗಿ ಗಂಡನಿಂದ ದೂರವಾಗಿದ್ದಳು. ಬಳಿಕ ಆರೋಪಿ ರಾಜು ಗಿರಿಜಾ ಜೊತೆ ಎರಡನೇಯ ಮದುವೆಯಾಗಿದ್ದನು.
ಸದ್ಯ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.