ಬೆಳಗಾವಿ: ಪತ್ನಿಯು ನ್ಯುಮೋನಿಯಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪತಿ ಆಕೆಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಬೆಳಗಾವಿ ಮರಗಾಯಿ ನಗರದ ನಿವಾಸದಲ್ಲಿ ಪತಿ ಶಿವಾ ಚೌಗಲೆ ಅವರು ಪತ್ನಿ ದಿ.ಮೈನಾಬಾಯಿ ಮೂರ್ತಿ ಸ್ಥಾಪನೆಯನ್ನು ದೀಪಾವಳಿ ಹಬ್ಬದ ದಿನ ಮಾಡಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಈ ಮೂರ್ತಿ ನಿರ್ಮಾಣವಾಗಿದೆ.
ದಿ.ಮೈನಾಬಾಯಿ ಚೌಗಲೆ ಅವರು ಮಾಜಿ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದರು. 2021ರ ಮೇ ತಿಂಗಳಲ್ಲಿ ಶಿವಾ ಚೌಗಲೆ ಹಾಗೂ ಮೈನಾಬಾಯಿ ಚೌಗಲೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಶಿವಾ ಚೌಗಲೆಗೆ ಕೋವಿಡ್ ಸೋಂಕು ತಗಲಿದ್ರೆ, ಪತ್ನಿ ಮೈನಾಬಾಯಿಗೆ ನ್ಯುಮೋನಿಯಾ ಜ್ವರವಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೈನಾಬಾಯಿ ಚೌಗಲೆ ಸಾವನ್ನಪ್ಪಿದ್ದರು. ಈ ಪರಿಣಾಮ ಶಿವಾ ಅವರಿಗೆ ಪತ್ನಿ ನೆನೆಪು ಸದಾ ಕಾಡುತ್ತಿದ್ದರಿಂದ ಮೂರ್ತಿ ಸ್ಥಾಪನೆ ಬಗ್ಗೆ ನಿರ್ಧಾರ ಮಾಡಿದ್ದು, ಜ್ಯೋತಿಷಿಗಳ ಸಲಹೆ ಮೇರೆಗೆ ಪತ್ನಿಯ ಮೂರ್ತಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಮೂರನೇ ಪೀಠ ಅಸ್ತಿತ್ವಕ್ಕೆ..?
ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮನೆಯ ಮೇಲಿನ ಕೋಣೆಯಲ್ಲಿ ಅದ್ಧೂರಿಯಾಗಿ ಮೈನಾಬಾಯಿ ಅವರ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಮನೆಯ ಮುಂದೆ ಪೆಂಡಾಲ್, ಬಂಧು, ಬಳಗಕ್ಕೆ ಊಟದ ವ್ಯವಸ್ಥೆ ಮಾಡಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಗಿದೆ. ಮೂರ್ತಿಯ ಜೊತೆಗೆ ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿ ಎಲ್ಲ ವಸ್ತುಗಳನ್ನು ಇಡಲು ವಾರ್ಡರೋಬ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೈನಾಬಾಯಿ ಹೆಸರಿನಲ್ಲಿ ಫೌಂಡೇಶನ್ ಸ್ಥಾಪನೆ ಮಾಡಿ ಅಭಿವೃದ್ಧಿ ಕಾರ್ಯ ನಡೆಸಲು ಶಿವಾ ಅವರು ನಿರ್ಧಾರ ಮಾಡಿದ್ದಾರೆ.
ಶಿವಾ ಚೌಗಲೆ, ಮೈನಾಬಾಯಿ ಇಬ್ಬರು ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದರು. ಒಂದು ಅವಧಿಗೆ ಮೈನಾಬಾಯಿ ಅವರು ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ