ಬೆಂಗಳೂರು: ನಗರದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಟೆಕ್ಕಿಯೊಬ್ಬ ತನ್ನ ಪತ್ನಿ ವಿರುದ್ಧ ವಧುದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.
ಆಂಧ್ರ ಮೂಲದ ಧೀರಾಜ್ ರೆಡ್ಡಿ ಚಿಂತಾಲ ತನ್ನ ಪತ್ನಿ ಜಯಶೃತಿ ವಿರುದ್ಧ ದೂರು ನೀಡಿದ್ದಾರೆ. ವೃತ್ತಿಯಲ್ಲಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದಾರೆ. ಈಗ ಪತ್ನಿ ವಧುದಕ್ಷಿಣೆಗಾಗಿ ಪೀಡಿಸಿದಕ್ಕಾಗಿ ದೂರು ನೀಡಿದ್ದಾರೆ. ಪತ್ನಿ ಜಯಶೃತಿ ಐಷಾರಾಮಿ ಜೀವನ ನಡೆಸಲು ಗಂಡನಿಗೆ ಹಣ ಹಾಗೂ ಆಭರಣಗಳಿಗಾಗಿ ಪೀಡಿಸುತ್ತಿದ್ದರು ಎಂದು ತಿಳಿದುಬಂದಿದೆ.
Advertisement
2016ರಲ್ಲಿ ಧೀರಾಜ್ ರೆಡ್ಡಿ ಚಿಂತಾಲ ಮತ್ತು ಜಯಶೃತಿ ವಿವಾಹವಾಗಿದ್ದರು. ಕಳೆದ ವರ್ಷ 30 ಲಕ್ಷ ಮೌಲ್ಯದ ಡೈಮಂಡ್ ಡಾಬು ಕೊಡಿಸುವಂತೆ ಪತ್ನಿ ಪೀಡಿಸಿದ್ದಳು. ಒಂದು ವೇಳೆ ಡಾಬು ಕೊಡಿಸದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು. ತನ್ನ ತಂಗಿ ಮದುವೆಗೆ 40 ಲಕ್ಷ ಮೌಲ್ಯದ ಆಭರಣಕ್ಕೆ ಬೇಡಿಕೆ ಇಟ್ಟಿದ್ದಳು. ಪತ್ನಿಯ ವರ್ತನೆ ಬಗ್ಗೆ ಆಕೆಯ ಪೋಷಕರ ಬಳಿ ಪತಿ ಧೀರಾಜ್ ಹೇಳಿಕೊಂಡಿದ್ದರು. ಆಗ ಅವರು ಕೂಡ ಪತ್ನಿ ಹೇಳಿದಂತೆ ಕೇಳಬೇಕೆಂದು ತಾಕೀತು ಹಾಕಿದ್ದರು. ಜೊತೆಗೆ ನಿನ್ನ ಎಲ್ಲ ಆಸ್ತಿಯನ್ನೆಲ್ಲ ಜಯಶೃತಿ ಹೆಸರಿಗೆ ಬರೆದುಕೊಡು ಎಂದು ಬೆದರಿಕೆ ಒಡ್ಡಿದರು. ಅಷ್ಟೇ ಅಲ್ಲದೇ ಕಳೆದ ತಿಂಗಳು 2 ಕೋಟಿ ಹಣ ನೀಡುವಂತೆ ಪ್ರತಿದಿನ ಕಿರುಕುಳ ನೀಡುತ್ತಾರೆ ಎಂದು ಧೀರಾಜ್ ದೂರಿನಲ್ಲಿ ತಿಳಿಸಿದ್ದಾರೆ.
Advertisement
ಪತ್ನಿ ಕೂಡ ತನ್ನ ಸ್ನೇಹಿತರ ಮೂಲಕ ಪತಿಗೆ ಬೆದರಿಕೆಯೊಡ್ಡಿದ್ದರು ಎಂದು ತಿಳಿದುಬಂದಿದೆ. ಇದರಿಂದ ನೊಂದ ಪತಿ, ಪತ್ನಿ ಜಯಶೃತಿ ಹಾಗೂ ಪೋಷಕರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಧುದಕ್ಷಿಣೆ ಹಾಗೂ ಬೆದರಿಕೆ ಆರೋಪದಡಿ ದೂರು ಸ್ವೀಕರಿಸಿದ ಪೊಲೀಸರು ಸದ್ಯ ಇಬ್ಬರನ್ನು ಕರೆಸಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.
Advertisement