ಬೆಂಗಳೂರು: ಪತ್ನಿಯನ್ನು ಕೊಲ್ಲಲು ಸುಪಾರಿ ನೀಡಿದ ಪತಿ ಹಾಗೂ ಸುಪಾರಿ ಹಂತಕರ ತಂಡವನ್ನು ವೈಯಾಲಿಕಾವಲ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಪತಿ ನರೇಂದ್ರಬಾಬು ಹಾಗೂ ಸುಪಾರಿ ಗ್ಯಾಂಗ್ ನ ಸದಸ್ಯರಾದ ಚಿನ್ನಸ್ವಾಮಿ ಮತ್ತು ಅಭಿಲಾಷ್ ಬಂಧಿತ ಆರೋಪಿಗಳು. ನರೇಂದ್ರಬಾಬು ಎಂಬಾತ ತನ್ನ ಪತ್ನಿ ವಿನುತಾರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ. ಇದರಂತೆ ಗುರುವಾರ ನಗರದ ವೈಯಾಲಿಕಾವಲ್ ನಲ್ಲಿ ವಿನುತಾರನ್ನು ಕೊಲೆ ಮಾಡಲು ಆಟೋದಲ್ಲಿ ಕಾದು ಕುಳಿತಿದ್ದ ವೇಳೆ ಸುಪಾರಿ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಪತಿ ಹಾಗೂ ಪತ್ನಿಯ ನಡುವಿನ ಕೌಟುಂಬಿಕ ಕಲಹವೇ ಕೊಲೆ ಯತ್ನಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಕಳೆದ ಐದು ವರ್ಷಗಳಿಂದ ದಂಪತಿ ದೂರ ವಾಸಿಸುತ್ತಿದ್ದರು. ಆದರೆ ವಿನುತಾ ಪತಿಯ ಆಸ್ತಿಯಲ್ಲಿ ಪಾಲು ಬೇಕು ಎಂದು ಗಲಾಟೆ ಮಾಡಿದ್ದರು. ಇದೇ ವಿಚಾರಕ್ಕೆ ವೈಯಾಲಿಕಾವಲ್ ಪೊಲೀಸ್ ಸ್ಟೇಷನ್ ಅಲ್ಲಿ ಇಬ್ಬರ ಮೇಲೂ ಐದು ದೂರು ದಾಖಲಾಗಿದೆ.
Advertisement
ಈ ನಡುವೆ ವಿನುತಾ ಕಳೆದ 6 ತಿಂಗಳ ಹಿಂದೆ ನರೇಂದ್ರಬಾಬು ಮನೆಯಲ್ಲಿ ಸೇರಿಕೊಂಡು ಆತನನ್ನು ಹೊರಹಾಕಿ ಆಸ್ತಿ ಲಪಟಾಯಿಸುವ ಪ್ಲಾನ್ ಮಾಡಿದ್ದರು. ಇದರಿಂದ ಆರೋಪಿ ನರೇಂದ್ರಬಾಬುವಿಗೆ ವಾಸಿಸಲು ಮನೆ ಇರಲಿಲ್ಲ. ಹೀಗಾಗಿ ನರೇಂದ್ರಬಾಬು 15 ಲಕ್ಷ ರೂ. ಗಳಿಗೆ ಪತ್ನಿಯ ಕೊಲೆ ಮಾಡಲು ಸುಪಾರಿ ನೀಡಿದ್ದ. ಅದರಂತೆ ಹಂತಕರಿಗೆ ಎರಡು ಲಕ್ಷ ರೂ. ಅಡ್ವಾನ್ಸ್ ಸಹ ನೀಡಿದ್ದ.
Advertisement
ಕಳೆದ ಎರಡು ದಿನಗಳ ಹಿಂದೆ ಆಟೋದಲ್ಲಿ ಸುಪಾರಿ ಹಂತಕರು ಮಾರಾಕಾಸ್ತ್ರಗಳೊಂದಿಗೆ ಹೊಂಚು ಹಾಕಿದ್ದರು. ಆದರೆ ಅಂದು ಕೊಲೆ ಸಾಧ್ಯವಾಗಿರಲಿಲ್ಲ. ಕೊಲೆ ಬಗ್ಗೆ ಮಾಹಿತಿ ಪಡೆದ ವೈಯಾಲಿಕಾವಲ್ ಪೊಲೀಸರು ತಕ್ಷಣವೇ ಎಚ್ಚೆತ್ತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿ ದಿನ ಪತ್ನಿಗೆ ನೀನು ದಪ್ಪಗೆ ಇದ್ದೀಯ ಎಂದು ಪತಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸರಗೊಂಡಿದ್ದ ವಿನುತಾ ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಸ್ತುತ ವೈಯಾಲಿಕಾವಲ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.