ಕಲಬುರಗಿ: ಮದುವೆಯಾಗಿ ಕೇವಲ ಮೂರು ತಿಂಗಳಲ್ಲಿ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ಮಹಾದೇವ ನಗರದಲ್ಲಿ ನಡೆದಿದೆ.
ಆಳಂದ ತಾಲೂಜಿನ ನವಜಾಪುರ ಗ್ರಾಮದ ರಾಕೇಶ್ ಬಿರಾದಾರ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಕೇಶ್ ಹಾಗೂ ಯಡ್ರಾಮಿ ತಾಲೂಕಿನ ಕೊಳಗೇರಿಯ ಮೇಘಾ ಮದುವೆ ಆರು ತಿಂಗಳ ಹಿಂದೆ ನಡೆದಿತ್ತು. ಈ ಮಧ್ಯೆ ಮನೆಯಲ್ಲಿ ಕೆಲಸ ಮಾಡುವ ಸಂಬಂಧ ಗಂಡ-ಹೆಂಡತಿ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಮಧ್ಯೆ ಮೇಘಾ ಹಿರಿಯ ಸಹೋದರಿ ಪ್ರಿಯಾಂಕಾ ಹಾಗೂ ತಾಯಿ ರೇಣುಕಾ ಸಹ ಇತ್ತೀಚೆಗೆ ರಾಕೇಶ್‌ಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ತಮ್ಮ ಮಗಳಿಗೆ ಏನಾದರೂ ತೊಂದರೆಯಾದ್ರೆ ಪೊಲೀಸ್ ಕಂಪ್ಲೇಂಟ್ ನೀಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಎರಡು ದಿನಗಳ ಹಿಂದೆ ಹಾಲು – ಮೊಸರು ತರುವ ಸಂಬಂಧ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ. ಆ ಬಳಿಕ ದಂಪತಿಯ ನಡುವೆ ಏರ್ಪಟ್ಟ ವಿರಸಕ್ಕೆ ತೆರೆ ಎಳೆಯಲು ಮನೆಯ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿ ಒಂದುಗೂಡಿಸಿದ್ದರಾದರೂ, ದಂಪತಿ ಮಧ್ಯೆ ಬಿಗುಮಾನ ಮುಂದುವರೆದಿತ್ತು ಎಂದು ಹೇಳಲಾಗಿದೆ.
ಈ ಮಧ್ಯೆ, ಇಂದು ಬೆಳಗ್ಗೆ ಗಂಡನ ವಿರುದ್ಧ ದೂರು ನೀಡುವುದಾಗಿ ಪತ್ನಿ ಮೇಘಾ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬೇಸತ್ತ ರಾಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಹಿನ್ನೆಲೆಯಲ್ಲಿ ಪತ್ನಿ ಮೇಘಾ ಸೇರಿದಂತೆ ಮೂವರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತಿಯ ಕುಟುಂಬಸ್ಥರ ಆರೋಪ ತಳ್ಳಿಹಾಕಿದ ಪತ್ನಿ, ಸಣ್ಣ ಪುಟ್ಟ ವಿಷಯಗಳಿಗೆ ನನ ಪತಿ ಜಗಳವಾಡುತ್ತಿದ್ದ. ಇನ್ನು ಅವರ ಕುಟುಂಬಸ್ಥರು ಈ ಸಮಸ್ಯೆಗೆ ಪರಿಹಾರ ಮಾಡಲಿಲ್ಲ, ನಿನ್ನೆ ಸಾಯಂಕಾಲ ಸಹ ಇಬ್ಬರ ನಡುವೆ ಜಗಳ ನಡೆದ್ದಾಗ ನನ ಮೇಲೆ ರಾಕೇಶ್ ಹಲ್ಲೆ ಮಾಡಿದ್ದಾನೆ. ಆದರೆ ಅವರ ಕುಟುಂಬಸ್ಥರು ಈ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲಿಲ್ಲ ಅಂತಾ ಮೃತನ ಕುಟುಂಬಸ್ಥರ ವಿರುದ್ಧವೆ ಮೇಘಾ ಆರೋಪಿಸಿದ್ದಾಳೆ.