– ಕೆಪಿ ನಾಗರಾಜ್
ಮೈಸೂರು: ಪ್ರಸಾದ ತಿಂದು ನರಳಾಡುತ್ತಿದ್ದ ಪತ್ನಿಯನ್ನು ಬದುಕಿಸಿಕೊಳ್ಳಲು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದ ಪತಿ ದಾರಿ ಮಧ್ಯೆ ತೀವ್ರವಾಗಿ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಅಪ್ಪನನ್ನು ಕಳೆದುಕೊಂಡ ಮಕ್ಕಳು ಅಮ್ಮನನ್ನಾದರೂ ಉಳಿಸಿಕೊಡಿ ಎಂದು ರೋಧಿಸುತ್ತಿರುವ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿವೆ.
Advertisement
ಏನಾಗಿತ್ತು?: ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಮಾರ್ಟಳ್ಳಿಯ ಕೃಷ್ಣ ನಾಯ್ಕ ಪತ್ನಿ ಮೋನಿ ಬಾಯಿ ಜೊತೆ ಹೋಗಿದ್ದರು. ನಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯೆ ತೋರು ಎಂದು ಮಾರಮ್ಮನಿಗೆ ಪೂಜೆಯನ್ನೂ ಸಲ್ಲಿಸಿದ್ದಾರೆ. ಪೂಜೆ ಬಳಿಕ ದೇಗುಲದಲ್ಲಿ ಪ್ರಸಾದ ವಿತರಣೆ ಮಾಡಿದ್ದಾರೆ. ಇದನ್ನು ದೇವಸ್ಥಾನದಲ್ಲೇ ಕೃಷ್ಣ ನಾಯ್ಕ ದಂಪತಿ ತಿಂದಿದ್ದಾರೆ. ಮನೆಗೆ ಬಂದು ಮಗಳಿಗೆ ಪ್ರಸಾದ ಕೊಟ್ಟಿದ್ದಾರೆ. ಆದರೆ ಮಗಳು ಪ್ರಿಯಾ ತಕ್ಷಣ ಪ್ರಸಾದ ತಿನ್ನಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ಕೃಷ್ಣ ನಾಯ್ಕರ ಪತ್ನಿ ಮೋನಿ ಬಾಯಿಗೆ ವಾಂತಿ, ತಲೆ ಸುತ್ತು ಶುರುವಾಗಿದೆ. ಆದರೆ ತಾವು ತಿಂದಿದ್ದು ವಿಷಪೂರಿತ ಆಹಾರ ಎಂದು ಗೊತ್ತಾಗದ ಕೃಷ್ಣ ನಾಯ್ಕ ಪತ್ನಿಯ ಬಳಿ, ಬಿಸಿಲಿನಿಂದಾಗಿ ಹೀಗಾಗಿದೆ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದಾರೆ.
Advertisement
Advertisement
ಆದರೆ ಸಮಯ ಕಳೆದಂತೆ ಪತ್ನಿಯ ವಾಂತಿ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಅವರು ಸಮೀಪದ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಇವರಂತೆಯೇ ಆಗಮಿಸಿದ್ದವರನ್ನು ನೋಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಪ್ರಸಾದಲ್ಲಿ ವಿಷ ಸೇರ್ಪಡೆಯಾಗಿರುವ ವಿಚಾರ ಗೊತ್ತಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ. ಮೈಸೂರು ತಲುಪೋ ಮುನ್ನವೇ ಕೃಷ್ಣ ನಾಯ್ಕ ಅವರಿಗೂ ವಾಂತಿ ಶುರುವಾಗಿದೆ. ಅವರನ್ನು ನೇರವಾಗಿ ಕೆಆರ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ಕರೆ ತಂದೆವು.
Advertisement
ಆದರೆ ಇಲ್ಲಿಗೆ ಬಂದು 5 ನಿಮಿಷಕ್ಕೇ ಅಪ್ಪ ನನ್ನ ಬಿಟ್ಟು ಬಿಟ್ಟು ಹೊರಟು ಹೋದ್ರು ಎಂದು ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ವಿವರಿಸಿದರು ಮೃತ ಕೃಷ್ಣ ನಾಯ್ಕರ ಪುತ್ರಿ ಪ್ರಿಯಾ.
ನನ್ನ ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪನನ್ನು ಕಳೆದುಕೊಂಡಿದ್ದೇವೆ. ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಏನೂ ಹೇಳೋಕಾಗಲ್ಲ ಅಂತಿದ್ದಾರೆ. ಅವರನ್ನು ಉಳಿಸಿಕೊಡಿ. ಅವರೂ ಹೋದರೆ ನಮ್ಮ ವಿದ್ಯಾಭ್ಯಾಸವೇ ನಿಂತು ಹೋಗುತ್ತದೆ. ನಮ್ಮ ಕುಟುಂಬದಲ್ಲಿ ನಾನು ಚಿಕ್ಕವಳು. ಅಕ್ಕ ಹಾಗೂ ನನಗೊಬ್ಬ ತಮ್ಮ ಇದ್ದಾರೆ. ಎಲ್ರೂ ಹೋದ್ರೆ ನಮ್ಮನ್ನು ಓದ್ಸೋರು ಯಾರಿದ್ದಾರೆ..? ನಮ್ಮ ಅಮ್ಮನ ಚಿಕಿತ್ಸೆಗೆ ನೆರವಾಗಿ. ಯಾರು ಏನೋ ಮಾಡ್ಕೊಂಡು ನಮ್ಮ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿದ್ದಾರೆ.
ನಮ್ಮ ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಸಾರ್ ಎಂದು ಗೋಗರೆದಳು ಪ್ರಿಯಾ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಏನೂ ಅರಿಯದ ಈ ಮುಗ್ಧ ಮಕ್ಕಳ ಅಪ್ಪ ಯಾರದೋ ಸಿಟ್ಟು, ದ್ವೇಷಕ್ಕೆ ಬಾರದ ಲೋಕಕ್ಕೆ ಹೋಗಿದ್ದಾರೆ. ಅಮ್ಮ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ನಂಬಿದ ದೇವರು ಕೈ ಬಿಡಲ್ಲ ಎಂಬ ಆಶಯದೊಂದಿಗೆ ಮಕ್ಕಳು ಪ್ರಾರ್ಥಿಸುತ್ತಿದ್ದಾರೆ ‘ದೇವರೇ ನಮ್ಮಮ್ಮನ ಉಳಿಸಿಕೊಡಿ…!’.
https://www.youtube.com/watch?v=IeYaHG3q9I4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv