ಮೈಸೂರು: ಪ್ರೀತಿಸಿ ಮದುವೆಯಾದ ಮರು ದಿನವೇ ನಾಪತ್ತೆಯಾಗಿದ್ದ ಪತ್ನಿ ಎರಡು ತಿಂಗಳಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದಿದೆ.
ದೇವನೂರು ಗ್ರಾಮದ ವಿಘ್ನೇಶ್ (22) ಆತ್ಮಹತ್ಯೆಗೆ ಶರಣಾದ ಪತಿ. ದೇವನೂರು ಗ್ರಾಮದ ಸೌಜನ್ಯಳನ್ನು ವಿಘ್ನೇಶ್ ಪ್ರೀತಿಸುತ್ತಿದ್ದನು. ಎರಡು ತಿಂಗಳ ಹಿಂದೆ ಯಾರಿಗೂ ಹೇಳದೇ ಮುಡುಕುತೊರೆಯಲ್ಲಿ ಇಬ್ಬರು ಮದುವೆಯಾಗಿದ್ದರು. ಮದುವೆಯಾದ ಮರುದಿನವೇ ಬಟ್ಟೆ ತರಲು ತವರು ಮನೆಗೆ ಹೋಗಿ ಬರುವುದಾಗಿ ತೆರಳಿದ್ದ ಸೌಜನ್ಯ ವಾಪಸ್ಸಾಗಿರಲಿಲ್ಲ.
ಇತ್ತ ಸೌಜನ್ಯ ಪೋಷಕರು ವಿಘ್ನೇಶ್ ತಮ್ಮ ಪುತ್ರಿಯನ್ನು ಅಪಹರಿಸಿದ್ದಾನೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ವಿಘ್ನೇಶ್‍ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. ಆಗ ತವರು ಮನೆಗೆ ಹೋಗಿದ್ದ ಸೌಜನ್ಯಳನ್ನು ಆಕೆಯ ಪೋಷಕರೇ ಗೃಹ ಬಂಧನದಲ್ಲಿಟ್ಟಿದ್ದಾರೆಂದು ವಿಘ್ನೇಶ್ ಆರೋಪಿಸಿದ್ದನು.
ಎರಡು ತಿಂಗಳಾದರೂ ಸೌಜನ್ಯ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಘ್ನೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಘ್ನೇಶ್ ಪೋಷಕರು ಸೌಜನ್ಯ ಹಾಗೂ ಆಕೆಯ ಪೋಷಕರು ಸೇರಿದಂತೆ ವಿರುದ್ಧ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.