ಚಾಮರಾಜನಗರ: ಪತಿ ಪ್ರತಿದಿನ ಕುಡಿದು ಬಂದು ಹೊಡೆದು ಬಡಿದು ಗಲಾಟೆ ಮಾಡುತ್ತಿದ್ದ ಎಂದು ಪತ್ನಿ ಆತನ ಕಿರುಕುಳ ಸಹಿಸದೆ ಪಂಚಾಯ್ತಿ ಮೊರೆ ಹೋಗಿದ್ದರು. ಆದರೆ ಪಂಚಾಯ್ತಿಯವರು ಬೇರೆ ಬೇರೆಯಾಗಿರಿ ಎಂದು ತೀರ್ಮಾನ ಕೊಟ್ಟಿದ್ದರು. ಆದರೆ ಪತಿ ತನ್ನ ಪತ್ನಿಯನ್ನು ಬಿಟ್ಟಿರಲಾರದೇ ಮೊಬೈಲ್ ಟವರ್ ಏರಿದ್ದನು.
ಚಾಮರಾಜನಗರ ತಾಲೂಕು ವೆಂಕಟಯ್ಯನ ಛತ್ರದ ಮಹೇಶ್‍ಗೆ 11 ವರ್ಷಗಳ ಹಿಂದೆ ಅದೇ ಗ್ರಾಮದ ಜಯಲಕ್ಷ್ಮಿಯೊಂದಿಗೆ ಮದುವೆಯಾಗಿತ್ತು. ಇಬ್ಬರಿಗೆ ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಮಹೇಶ್ ಪ್ರತಿ ದಿನ ಕುಡಿದು ಬಂದು ಪತ್ನಿಗೆ ಹೊಡೆದು, ಬಡಿದು ಜಗಳವಾಡುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಪತ್ನಿ ಊರ ಪಂಚಾಯ್ತಿಗೆ ದೂರು ಕೊಟ್ಟಿದ್ದರು. ಪಂಚಾಯ್ತಿ ಮುಖಂಡರು ಇಬ್ಬರು ಬೇರೆ ಬೇರೆ ಇರುವಂತೆ ಸೂಚಿಸಿದ್ದರು. ಅದರಂತೆ ಇಬ್ಬರು ಕೆಲ ತಿಂಗಳಿಂದ ಬೇರೆ ಬೇರೆ ಇದ್ದರು.
ಕಳೆದ ಹದಿನೈದು ದಿನಗಳಿಂದ ಬೇರೆ ಇದ್ದ ಪತಿ ಮಹೇಶ್ ಗೆ ಪತ್ನಿಯನ್ನು ಬಿಟ್ಟಿರಲಾರದೆ ತನ್ನ ಹೆಂಡ್ತಿ ಬೇಕು ಅಂತ ಹೇಳಿ ಶುಕ್ರವಾರ ಮತ್ತೆ ಕಂಠಪೂರ್ತಿ ಕುಡಿದು ಗ್ರಾಮದ ಹೊರವಲಯದಲ್ಲಿದ್ದ ಮೊಬೈಲ್ ಟವರ್ ಏರಿ ಕುಳಿತನು. ಟವರ್ ಏರಿದ್ದ ಮಹೇಶನನ್ನು ಕೆಳಗಿಳಿಯುವಂತೆ ಗ್ರಾಮಸ್ಥರು ಪರಿಪರಿಯಾಗಿ ಕೂಗಿ ಹೇಳಿದ್ರೂ ಆತ ಕೆಳಗಿಳಿಯಲೇ ಇಲ್ಲ.
ಮಹೇಶ್ ಸುಮಾರು ಮೂರು ಗಂಟೆ ಕಾಲ ಅಲ್ಲಿಯೇ ಕುಳಿತಿದ್ದ. ಕಂಠಪೂರ್ತಿ ಕುಡಿದಿದ್ದ ಮಹೇಶ್ ಎಲ್ಲಿ ಅಲ್ಲಿಂದ ಕೆಳಗೆ ಬೀಳುತ್ತಾನೋ ಎಂಬ ಆತಂಕ ಎಲ್ಲರಿಗಿತ್ತು. ವಿಷಯ ತಿಳಿದ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸರು ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ಟವರ್ ಏರಿ ಕುಳಿತಿದ್ದ ಪತಿ ಮಹೇಶ್‍ನನ್ನು ಕೆಳಗಿಳಿಸಲು ಹರಸಾಹಸಪಟ್ಟರು.
ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸ್ ಹಾಗು ಅಗ್ನಿಶಾಮಕ ಸಿಬ್ಬಂದಿ ಕೊನೆಗೂ ಟವರ್ ಏರಿದ್ದ ಮಹೇಶ್‍ನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಸಫಲರಾದರು. ಹೆಂಡ್ತಿ ಬೇಕು ಹೆಂಡ್ತಿ ಅಂತ ಟವರ್ ಏರಿದ್ದ ಪತಿರಾಯನನ್ನು ಸುರಕ್ಷಿತವಾಗಿ ಕೆಳಗಿಳಿಸಿದಾಗ ಅಲ್ಲಿದ್ದವರೆಲ್ಲ ನಿಟ್ಟುಸಿರು ಬಿಟ್ಟರು. ಟವರ್ ಏರಿ ಎಲ್ಲರಿಗೂ ಟೆನ್ಷನ್ ಕೊಟ್ಟ ಮಹೇಶ್ ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv