ಪಾಟ್ನಾ: ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ ಕುಟುಂಬವು ಸ್ಟ್ರೆಚರ್ ಸಿಗದೆ ಗಂಟೆಗಳ ಕಾಲ ಪರದಾಡಿ, ಕೊನೆಗೆ ಪತಿಯೇ ಆಕೆಯನ್ನು ಭುಜದ ಮೇಲೆ ಹೊತ್ತೊಯ್ದ ಘಟನೆ ಬಿಹಾರದಲ್ಲಿ ನಡೆದಿದೆ.
ರಾಜ್ಯದ ಅತಿದೊಡ್ಡ ಆಸ್ಪತ್ರೆಯಾದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ (ಪಿಎಂಸಿಹೆಚ್) ಈ ಘಟನೆ ನಡೆದಿದೆ. ರಾಜ್ಯದ ಅತಿದೊಡ್ಡ ಆಸ್ಪತ್ರೆಯಾಗಿದ್ದರೂ ಗರ್ಭಿಣಿಗೆ ಸಿಬ್ಬಂದಿ ಸ್ಟ್ರೆಚರ್ ನೀಡದೇ ಅಮಾನವೀಯತೆ ತೋರಿದ್ದಾರೆ. ಬಳಿಕ ವಿಧಿಯಿಲ್ಲದೆ ಗರ್ಭಿಣಿಯನ್ನು ಪತಿ ಮಗುವಂತೆ ಭುಜದ ಮೇಲೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಳಿಕ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ನೆಲದ ಮೇಲೆ ಮಲಗಬೇಕಾಯಿತು ಎಂದು ವರದಿಯಾಗಿದೆ.
Advertisement
Advertisement
ಮಾಹಿತಿ ಪ್ರಕಾರ, ಗರ್ಭಿಣಿಯ ಸಂಬಂಧಿಕರು ಆಸ್ಪತ್ರೆಗೆ ಬಂದ ಕೂಡಲೇ ಸ್ಟ್ರೆಚರ್ ನೀಡಿ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಒತ್ತಾಯಿಸಿದ್ದರು. ಆದರೆ ಸಿಬ್ಬಂದಿ ಕುಟುಂಬದವರ ಬಳಿ 100 ರೂ. ಬೇಡಿಕೆ ಇಟ್ಟಿದ್ದಾರೆ. ಆದರೆ ಬಡ ಕುಟುಂಬಸ್ಥರ ಬಳಿ ಅಷ್ಟು ಹಣವಿರದ ಕಾರಣಕ್ಕೆ ಕೇವಲ 30 ರೂಪಾಯಿ ಮಾತ್ರ ಇದೆ ಎಂದಿದ್ದಾರೆ. ಇದರಿಂದಾಗಿ ಸಿಬ್ಬಂದಿ ಮಹಿಳೆಯನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲು ನಿರಾಕರಿಸಿದ್ದಾರೆ.
Advertisement
Advertisement
ಈ ಘಟನೆಯ ಬಗ್ಗೆ ಪಿಎಂಸಿಎಚ್ ನಿರ್ವಹಣೆ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ, ಎಚ್ಚೆತ್ತ ಪಿಎಂಸಿಎಚ್ ವೈದ್ಯರು ಮಹಿಳೆಗೆ ಚಿಕಿತ್ಸೆಯನ್ನು ಪ್ರಾರಂಭಿಸಿದರು.
ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಆಸ್ಪತ್ರೆಗಳ ವಾಸ್ತವವೇ ಬೇರೆ ಇದೆ. ಪಿಎಂಸಿಹೆಚ್‍ನಲ್ಲಿ ರೋಗಿಗಳಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಜನ ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ.