ಜೈಪುರ: ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ರಾಜಸ್ಥಾನದ ಸಿಖರ್ ನಗರದಲ್ಲಿ ನಡೆದಿದೆ.
ಈಗ ಸಂತ್ರಸ್ತೆ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಹಲ್ಲೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. 2010ರಲ್ಲಿ ಜೈಪುರ ಯುವಕನ ಜೊತೆ ಮಹಿಳೆಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಸುಮಾರು ಐದು ಲಕ್ಷ ರೂಪಾಯಿ ನಗದು ಹಾಗೂ ಬಂಗಾರವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.
ಮದುವೆಯ ನಂತರ ಪತಿ ಕುಟುಂಬಸ್ಥರು ವರದಕ್ಷಿಣೆಗಾಗಿ ಪ್ರತಿದಿನ ಆಕೆಗೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ ರೂಮಿನಲ್ಲಿ ಕೂಡಿ ಹಾಕಿ ಪತಿ, ಅತ್ತೆ, ಮಾವ, ಮೈದುನ ಸೇರಿದಂತೆ ಮನೆಯವರೆಲ್ಲ ಹೊಡೆಯುತ್ತಿದ್ದರು ಅಂತಾ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮದ್ಯವ್ಯಸನಿ ಪತಿ ಮೈತುಂಬ ಸಾಲ ಮಾಡಿಕೊಂಡಿದ್ದನು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಬದಲಿಗೆ ನನ್ನನ್ನು ಸ್ನೇಹಿತರಿಗೆ ನೀಡಿದ್ದಾನೆ. ಸ್ನೇಹಿತರಿಂದ ಅತ್ಯಾಚಾರವೆಸಗಿಸಿದ್ದಾನೆ. ನನಗೆ ನಶೆ ಬರುವ ಪದಾರ್ಥವನ್ನು ತಿನ್ನಿಸುತ್ತಿದ್ದನು ಎಂದು ಸಂತ್ರಸ್ತೆ ದೂರಿದ್ದಾರೆ.
ಇಷ್ಟು ಮಾಡಿದರೂ ಪತ್ನಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅನಾಥಾಶ್ರಮದಲ್ಲಿ ಬಿಟ್ಟು ಹೋಗಿದ್ದನು. ನಂತರ ಸಂತ್ರಸ್ತೆ ಎಲ್ಲ ವಿಚಾರವನ್ನೂ ಪೋಷಕರಿಗೆ ತಿಳಿಸಿದ್ದು, ಬಳಿಕ ಪೋಷಕರು ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.