ಚಿತ್ರದುರ್ಗ: ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಪತ್ನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿವರಾಮ್ ಮತ್ತು ನೀಲಮ್ಮ ಆತ್ಮಹತ್ಯೆಗೆ ಶರಣಾದ ದಂಪತಿ. ಚಿತ್ರದುರ್ಗ ತಾಲೂಕು ಈಚಲನಾಗೇನಹಳ್ಳಿ ಗ್ರಾಮದ ಶಿವರಾಮ್ ಹಾಗೂ ತರೀಕೆರೆ ತಾಲೂಕು ಸಗ್ಗೆ ತಿಮ್ಮಾಪುರ ಗ್ರಾಮದ ನೀಲಮ್ಮ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಂಡ-ಹೆಂಡತಿ ಇಬ್ಬರೂ ಸೇರಿ ಎಳನೀರು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಶಿವರಾಮ್ ಹೆಂಡತಿ ಮಾತು ಕೇಳಿ ತಾನು ದುಡಿದ ಹಣವನ್ನೆಲ್ಲಾ ಪತ್ನಿಯ ತವರಿಗೆ ಸಾಲ ಕೊಟ್ಟಿದ್ದನು. ಆದರೆ ಕೊಟ್ಟ ಹಣ ವಾಪಸ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಗಂಡ ಹೆಂಡತಿ ನಡುವೆ ನಿತ್ಯವೂ ಜಗಳ ನಡೆಯುತಿತ್ತು. ಈ ಸಂಬಂಧ ಒಮ್ಮೆ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರ ಮಧ್ಯಸ್ಥಿಕೆಯಲ್ಲಿ ರಾಜೀ ಪಂಚಾಯ್ತಿ ಮಾಡಿದ್ದರು. ಆದರೆ ಈ ವಿಚಾರ ವಿಕೋಪಕ್ಕೆ ತಿರುಗಿದ್ದು, ಗಂಡನ ಕಿರುಕುಳ ತಾಳದ ಪತ್ನಿ ನೀಲಮ್ಮ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಆಕೆಯನ್ನ ಕೂಡಲೇ ಶಿವರಾಮ್ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದನು. ಆದರೆ ತನ್ನ ಪತ್ನಿ ಬದುಕಿಲ್ಲ ಎಂಬುದನ್ನು ತಿಳಿದ ಕೂಡಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ಮೃತ ನೀಲಮ್ಮ ಸಂಬಂಧಿ ಪಾಂಡುರಂಗ ಹೇಳಿದ್ದಾರೆ.
ತನ್ನ ಪತ್ನಿಯ ಸಾವಿನಿಂದ ಆತಂಕಕ್ಕೀಡಾದ ಶಿವರಾಮ್ ಆತುರದ ಕೈಗೆ ಬುದ್ದಿ ಕೊಟ್ಟು, ತಾನು ಕೂಡ ಎಪಿಎಂಸಿ ಆವರಣದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಇತ್ತ ನೀಲಮ್ಮ ಮೃತಪಟ್ಟಿರುವ ವಿಚಾರ ತಿಳಿದ ಸಂಬಂಧಿಕರು ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಬಂದು ಶಿವರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ನೀಲಮ್ಮನ ಪತಿ ಶಿವರಾಮ್ ಶವ ಕೂಡ ಶವಗಾರದಲ್ಲಿ ಇರೋದನ್ನ ಕಂಡು ದಿಗ್ಬ್ರಮೆಗೊಂಡಿದ್ದಾರೆ. ಅಲ್ಲದೇ ಏನು ತಪ್ಪು ಮಾಡದ ಮಕ್ಕಳು ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಕಂಗಾಲಾಗಿದ್ದು, ಇಬ್ಬರ ಸಾವಿನಿಂದಾಗಿ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.
ಈ ಘಟನೆಯಿಂದಾಗಿ ಮೇಲ್ನೋಟಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದ್ದರೂ ಸಹ ನೀಲಮ್ಮಳ ಸಂಬಂಧಿಕರು ಮಾತ್ರ ಗಂಡ ಶಿವರಾಮ್ ಹೆಂಡತಿಯನ್ನು ಹೊಡೆದು ಕೊಲೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ನಡತೆ ಸರಿಯಿರಲಿಲ್ಲ, ಪ್ರತಿನಿತ್ಯ ಕುಡಿದು ಬಂದು ಹೆಂಡತಿಗೆ ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv