ಹುಣಸೂರು ಫಲಿತಾಂಶದ ಮೇಲೆ ಬಿಜೆಪಿಯ ನಾಯಕರಿಬ್ಬರ ಭವಿಷ್ಯ

Public TV
2 Min Read
H VISHWANATHA

ಮೈಸೂರು: ಹುಣಸೂರು ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ರಾಜಕೀಯ ಭವಿಷ್ಯ, ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಅವರ ರಾಜಕೀಯ ಮರು ಜನ್ಮ ಅಡಗಿರೋದು ಎಲ್ಲರಿಗೂ ಗೊತ್ತಿದೆ. ಇವರಿಬ್ಬರೂ ಮಾತ್ರವಲ್ಲ ಬಿಜೆಪಿಯ ಇನ್ನಿಬ್ಬರ ರಾಜಕೀಯ ಭವಿಷ್ಯವೂ ಈ ಫಲಿತಾಂಶದಲ್ಲಿ ಅಡಗಿದೆ.

ಹುಣಸೂರು ಉಪಚುನಾವಣೆ ಹಲವರ ರಾಜಕೀಯ ಭವಿಷ್ಯವನ್ನು ನೇರವಾಗಿ ಮತ್ತು ಪರೋಕ್ಷ ನಿರ್ಧರಿಸಲಿದೆ. ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‍ರನ್ನು ಗೆಲ್ಲಿಸಲು ಇಬ್ಬರು ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಒಬ್ಬರು ಸಚಿವ ಶ್ರೀರಾಮುಲು ಮತ್ತೊಬ್ಬರು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್. ಇವರಿಬ್ಬರೂ ಈ ಚುನಾವಣೆಯಲ್ಲಿ ಹೀಗೆ ಓಡಾಡುವುದಕ್ಕೆ ಕಾರಣವಿದೆ. ಈ ಫಲಿತಾಂಶದ ಮೇಲೆಯೆ ಇವರಿಬ್ಬರ ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲವೂ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

hunsuru

ಶ್ರೀರಾಮುಲು ಬಿಜೆಪಿಯೊಳಗೆ ತಮ್ಮ ಹಿಡಿತ ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಮತ್ತು ಡಿಸಿಎಂ ಸ್ಥಾನದ ಹತ್ತಿರಕ್ಕೆ ಹೋಗಲು ಈ ಫಲಿತಾಂಶ ಬಹಳ ಮುಖ್ಯ. ಹುಣಸೂರು ಕ್ಷೇತ್ರದಲ್ಲಿ ನಾಯಕ ಸಮುದಾಯದ ಮತಗಳು ಹೆಚ್ಚಿವೆ. ಇವು ಇಲ್ಲಿ ಫಲಿತಾಂಶದ ದಿಕ್ಕನ್ನೆ ಬದಲಾಯಿಸುವ ಶಕ್ತಿ ಹೊಂದಿವೆ. ಇಂತಹ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಅದರ ಕ್ರೆಡಿಟ್ ಶ್ರೀರಾಮುಲುಗೆ ಬರುತ್ತದೆ. ನಾಯಕ ಸಮುದಾಯ ಬಿಜೆಪಿ ಜೊತೆ ಸದಾ ಇರಬೇಕಾದರೆ ಶ್ರೀರಾಮುಲುಗೆ ಪಟ್ಟ ಕಟ್ಟುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗುತ್ತೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆಲ್ಲದಿದ್ದರೆ ನಾಯಕ ಸಮುದಾಯದಲ್ಲಿ ಶ್ರೀರಾಮುಲು ಗೆ ದೊಡ್ಡ ಹಿಡಿತವಿಲ್ಲ ಎಂಬ ಸಂದೇಶ ರವಾನೆ ಆಗುತ್ತೆ. ಅದರಲ್ಲೂ ಈಗ ನಾಯಕ ಸಮುದಾಯದ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿರುವ ಕಾರಣ ಶ್ರೀರಾಮುಲು ಪಕ್ಷದಲ್ಲಿ ಆಗ ಸೈಡ್ ಲೈನ್ ಆಗುವ ಸಾಧ್ಯತೆಗಳಿವೆ ಎಂಬ ಲೆಕ್ಕಾಚಾರಗಳು ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ.

hunsuru 1

ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಚಿವರಾಗಬೇಕು ಎಂಬ ಪ್ಲಾನ್ ಮಾಡಿದ್ದ ಯೋಗೇಶ್ವರ್ ಗೆ ಟಿಕೆಟ್ ಸಿಗದೇ ನಿರಾಸೆ ಆಗಿತ್ತು. ಆದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಯೋಗೇಶ್ವರ್, ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಹೋರಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ರಾಜಕೀಯ ಭವಿಷ್ಯ. ವಿಶ್ವನಾಥ್ ಗೆಲ್ಲಿಸಿಕೊಂಡು ಬಂದರೆ ಪರಿಷತ್ ಸದಸ್ಯರಾಗಿ ಮಾಡಿ ಸಚಿವ ಸ್ಥಾನ ಕೊಡುವ ಭರವಸೆ ಯೋಗೇಶ್ವರ್‍ಗೆ ಬಿಜೆಪಿಯಿಂದ ಸಿಕ್ಕಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲದೆ ಹೋದ್ರೆ ಯೋಗೇಶ್ವರ್ ರಾಜಕೀಯ ಭವಿಷ್ಯ ಮಂಕಾಗುವ ಸಾಧ್ಯತೆಗಳಿವೆ.

ಈ ಕಾರಣಗಳಿಂದಾಗಿಯೇ ಈ ಇಬ್ಬರು ನಾಯಕರು ಒಂದು ದಿನವೂ ಕ್ಷೇತ್ರದಿಂದ ಹೊರ ಹೋಗದೆ ಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿಯಷ್ಟೆ ಇವರಿಗೂ ಈ ಫಲಿತಾಂಶ ಮುಖ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *