ಮೈಸೂರು: ಅಯೋಗ್ಯ ಸರ್ಕಾರ ಬೀಳಿಸಿ, ಸ್ಥಿರ ಸರ್ಕಾರ ಸ್ಥಾಪಿಸಿದ ತೃಪ್ತಿ ನನಗಿದೆ ಎಂದು ಹುಣಸೂರಿನಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಮತದಾರನ ತೀರ್ಪು. ಗೆಲುವು-ಸೋಲು ಎಲ್ಲ ಅವರ ಕೈಯಲ್ಲಿ ಇದೆ. ಅವರು ನನಗೆ ಸೋಲಿನ ತೀರ್ಪು ನೀಡಿದರು. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಸೋಲನ್ನು ನಿರೀಕ್ಷಿಸಿರಲಿಲ್ಲ. ಅಂತಹ ವಾತಾವರಣಗಳು ಇರಲಿಲ್ಲ. ಜೆಡಿಎಸ್ ಮತ ಕಾಂಗ್ರೆಸ್‍ಗೆ ಶಿಫ್ಟ್ ಆದವು. ಹಾಗಾಗಿ ಈ ಸೋಲನ್ನು ನಾನು ಅನುಭವಿಸಬೇಕಾಯಿತು ಎಂದರು.
ಒಂದು ಕೆಟ್ಟ, ಅಯೋಗ್ಯ ಸರ್ಕಾರ. ಅಯೋಗ್ಯ ಸರ್ಕಾರವನ್ನು ಕೆಡವುದಕ್ಕೆ ನಾನು ಮುಂದೆ ನಿಂತೆ. ಅದು ಅವರಿಗೆ ಕಾರಣವಾಯಿತು. ಇದರಿಂದ ನನ್ನ ಮನಸ್ಸಿಗೆ ನೋವಾಗಿಲ್ಲ. ಒಂದು ಅಯೋಗ್ಯ ಸರ್ಕಾರ ಕೆಡವಿ, ಇನ್ನೊಂದು ಸರ್ಕಾರ ಸ್ಥಾಪನೆಯಾಗಿ, ಸ್ಥಾಪನೆಯಾದ ಸರ್ಕಾರ ಸ್ಥಿರ ಸರ್ಕಾರವಾಗಿ ಇಂದು 12 ಜನ ಬಿಜೆಪಿಯವರೇ ಗೆದ್ದಿದೆ. ಬಿಎಸ್‍ವೈಗೆ ಸ್ಥಿರ ಸರ್ಕಾರ ಕೊಡುವುದರ ಜೊತೆಗೆ ಅನರ್ಹರು ಎಂದು ಹೇಳುತ್ತಿದ್ದವರಿಗೆ ಅರ್ಹರು ಎಂಬ ಪಟ್ಟವನ್ನು ರಾಜ್ಯದ ಮತದಾರರು ಕೊಟ್ಟಿದ್ದಾರೆ ಎಂಬ ಖುಷಿಯಿದೆ ಎಂದರು.
ನನ್ನ ಸೋಲಿಗೆ ನೋವಿಲ್ಲ ಬದಲಾಗಿ ಅನರ್ಹರು ಎಂಬ ಪಟ್ಟವನ್ನು ಮತದಾರರು ತೆಗೆದಿದ್ದಾರೆ ಎಂಬುದು ಖುಷಿಯಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹರು, ಅವರಿಗೆ ಮತ ಹಾಕಬೇಡಿ ಎಂದು ಹೇಳುತ್ತಿದ್ದರು. ಆದರೆ ಈಗ ಬಿಜೆಪಿಯಲ್ಲಿ 12 ಮಂದಿ ಗೆದ್ದಿದ್ದಾರೆ. ನಾನು ಇಂದು ಸೋತಿರಬಹುದು. ಆದರೆ 12 ಮಂದಿ ಗೆದ್ದಿದ್ದಾರೆ. ನನಗೆ ಸೋಲಿನಿಂದ ನೋವಾಗಿಲ್ಲ. ವೈಯಕ್ತಿಕ ಕಾರಣದಿಂದ ಸೋತಿದ್ದೇನೆ. ಬಿಎಸ್‍ವೈ ಅವರ ಮೂರುವರೆ ವರ್ಷದ ಅಭಿವೃದ್ಧಿಗೆ ಮತದಾರರು ಸಾಥ್ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ನಾನು ರಾಜೀನಾಮೆ ನೀಡಿದ್ದು ಸರಿಯಾಗಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ಕೇವಲ ಮೂರು, ನಾಲ್ಕು ಜನರಿಗಿದ್ದ ಅಯೋಗ್ಯ ಸರ್ಕಾರ ಕೆಡವಿದ್ದು ಸರಿ. ಮತ್ತು ಹೊಸ ಸರ್ಕಾರದ ಸ್ಥಾಪನೆ ಮಾಡುವುದರಲ್ಲಿ ನನ್ನ ತ್ಯಾಗವಿದೆ ಎಂದರು. ಇದೇ ವೇಳೆ ಹುಣಸೂರು ಜನರ ಬಳಿ ಕ್ಷಮೆ ಕೇಳಬೇಕೆಂಬ ಎಚ್.ಪಿ ಮಂಜುನಾಥ್ ಅವರ ಹೇಳಿಕೆಗೆ ಈ ಮಾತು ಅಯೋಗ್ಯವಾದ ಮಾತು. ಮಂಜುನಾಥ್ ಅವರು ಈ ಮಾತನ್ನು ವಾಪಸ್ ಪಡೆಯಬೇಕು ಎಂದರು.