ಹೈದರಾಬಾದ್: ಕಳೆದೆರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ ಸಹೋದರಿ ಶರ್ಮಿಳಾ (YS Sharmila) ಅವರನ್ನ ಪೊಲೀಸರು (Police) ಜುಬಿಲಿ ಹಿಲ್ಸ್‌ನಲ್ಲಿರುವ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಿಸಿದ್ದಾರೆ.
ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ `ಪ್ರಜಾ ಸಂಸ್ಥಾನಂ’ ಪಾದಯಾತ್ರೆಗೆ ಅನುಮತಿ ನೀಡದ ತೆಲಂಗಾಣ ರಾಷ್ಟ್ರ ಸಮಿತಿ (TRS) ಸರ್ಕಾರ ವಿರುದ್ಧ ಶುಕ್ರವಾರ ಬೆಳಿಗ್ಗೆಯಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದೀಗ ಆಸ್ಪತ್ರೆಗೆ ದಾಖಲಿಸಿದ್ದು, ಶರ್ಮಿಳಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಇಶಾನ್ ಕಿಶನ್ ಒಂದೇ ದ್ವಿಶತಕಕ್ಕೆ ಹಲವು ದಾಖಲೆಗಳು ಉಡೀಸ್ – ಕೊಹ್ಲಿಗೆ ಥ್ಯಾಂಕ್ಸ್
- Advertisement
- Advertisement
ಈ ಹಿಂದೆ ಶರ್ಮಿಳಾ ಅವರಿಗೆ ರಕ್ತದೊತ್ತಡ ಹಾಗೂ ಗ್ಲೂಕೋಸ್ ಮಟ್ಟವು ಕಡಿಮೆಯಾಗಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೇ ನಿರ್ಜಲೀಕರಣ ಸಮಸ್ಯೆ ಇರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು. ಇದು ಕಿಡ್ನಿ (ಮೂತ್ರಪಿಂಡ)ಗೆ ಸಾಕಷ್ಟು ಅಪಾಯ ಇರುವ ಲಕ್ಷಣವನ್ನು ಸೂಚಿಸಿತ್ತು ಎನ್ನಲಾಗಿತ್ತು. ಇದೀಗ ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದು ಅಭಯ ನೀಡಿದ್ದಾರೆ.
ಶರ್ಮಿಳಾ ಅವರು ನ್ಯಾಯಾಲಯದ ಅನುಮತಿಯಿದ್ದರೂ ಪೊಲೀಸರು ತನಗೆ ಪಾದಯಾತ್ರೆ ಮುಂದುವರಿಸಲು ಅವಕಾಶ ನೀಡುತ್ತಿಲ್ಲ. ತೆಲಂಗಾಣದಲ್ಲಿ ಪ್ರಜಾಪ್ರಭುತ್ವ ರಕ್ಷಿಸಬೇಕೆಂದು ಪಾದಯಾತ್ರೆ ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶುಕ್ರವಾರ ಸತ್ಯಾಗ್ರಹಕ್ಕೆ ಕುಳಿತಿದ್ದರು. ಇದನ್ನೂ ಓದಿ: ಮೈಲಿಗೆ ಆಗುತ್ತೆ ಅಂತಾ ದತ್ತಪೀಠದಲ್ಲಿ ಮೌಲ್ವಿಗಳ ಪೂಜೆಗೆ ನಕಾರ – ಅರ್ಚಕರ ವಿರುದ್ಧ ಆರೋಪ
ಇದೇ ಸಂದರ್ಭದಲ್ಲಿ ತೆಲಂಗಾಣ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸಿಎಂ ಕೆ. ಚಂದ್ರಶೇಖರ್ ರಾವ್ (KCR) ನನ್ನ ಪಾದಯಾತ್ರೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ನನ್ನ ಬಸ್ಸೊಂದನ್ನ ಸುಟ್ಟುಹಾಕಿದರು. ನನ್ನ ಬೆಂಬಲಿತರನ್ನ ಥಳಿಸಿ ಹಿಂಸಾಚಾರ ಮಾಡಿದರು. ನಂತರ ನನ್ನನ್ನು ಬಂಧಿಸಿ ಕರೆದೊಯ್ದಿದ್ದರು. ಮರುದಿನ ನ್ಯಾಯಾಲಯ ನನ್ನ ಪಾದಯಾತ್ರೆ ಮುಂದುವರಿಸಲು ಅನುಮತಿ ನೀಡಿತ್ತು. ಆದಾಗ್ಯೂ ಪಾದಯಾತ್ರೆ ಮುಂದುವರಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ನವೆಂಬರ್ 29 ರಂದು, ವೈ.ಎಸ್ ಶರ್ಮಿಳಾ ಅವರು ಎಸ್‌ಯುವಿ ಕಾರಿನೊಳಗೆ ಕುಳಿತಿದ್ದಾಗ ಪಂಜಗುಟ್ಟ ಪೊಲೀಸರು ಕಾರಿನ ಸಮೇತ ಅವರನ್ನು ಎಳೆದೊಯ್ದು ವಶಕ್ಕೆ ಪಡೆದಿದ್ದರು.