ವಾಷಿಂಗ್ಟನ್: ರಾತ್ರಿ ಹೊತ್ತಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಪೆಟ್ರೋಲ್ ಬಂಕ್ ತುಂಬಾ ನೆಲದ ಮೇಲೆ ಕುಳಿತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಇವು ಗ್ರಾಕಲ್ ಪಕ್ಷಿಗಳಾಗಿದ್ದು, ಟೆಕ್ಸಾಸ್‍ನ ಹೂಸ್ಟನ್ ನಲ್ಲಿರೋ ಎಕ್ಸಾನ್‍ಮೊಬಿಲ್ ಸ್ಟೇಷನ್ ನಲ್ಲಿ ಕುಳಿತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಮಾಧ್ಯಮವೊಂದರ ನಿರೂಪಕಿ ಕ್ರಿಸ್ಟೀನ್ ಡೊಬ್ಬಿನ್ ಫೆಬ್ರವರಿ 2ರಂದು ಪೆಟ್ರೋಲ್ ಹಾಕಿಸಲೆಂದು ಬಂಕ್‍ಗೆ ಹೋದಾಗ ಈ ದೃಶ್ಯ ಕಂಡುಬಂದಿದ್ದು, ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
Advertisement
Advertisement
Advertisement
ಈ ಬಂಕ್‍ನಲ್ಲಿ ಮುಂಚೆಯೂ ಪಕ್ಷಿಗಳನ್ನ ನೋಡಿದ್ದೇನೆ. ಆದ್ರೆ ಇಷ್ಟೊಂದು ಸಂಖ್ಯೆಯಲ್ಲಿ ನೆಲದ ಮೇಲೆ ಕುಳಿತಿರೋದು ನೋಡಿರಲಿಲ್ಲ. ಸಾಮಾನ್ಯವಾಗಿ ಅವು ವಿದ್ಯುತ್ ತಂತಿಗಳ ಮೇಲೆ ಇರುತ್ತವೆ ಎಂದು ಕ್ರಿಸ್ಟೀನ್ ಹೇಳಿದ್ದಾರೆ. ಅಂದು ರಾತ್ರಿ ನಿಜಕ್ಕೂ ರೋಚಕವಾಗಿತ್ತು. ನಾನು ಕೊನೆಗೆ ಮತ್ತೊಂದು ಬಂಕ್‍ಗೆ ಹೋಗಬೇಕಾಯ್ತು. ಆದ್ರೆ ಅಲ್ಲೂ ಕೆಲವು ಪಕ್ಷಿಗಳಿದ್ದವು ಎಂದಿದ್ದಾರೆ.
Advertisement
ಪಕ್ಷಿಗಳು ದಾಳಿ ಮಾಡಬಹುದೆಂಬ ಭಯವಿದ್ದರೂ ಯಾವುದೇ ತೊಂದರೆ ಇಲ್ಲದೆ ಕಾರಿಗೆ ಇಂಧನ ಹಾಕಿಸಿದೆ. ಆದ್ರೆ ಅಷ್ಟೊಂದು ಪಕ್ಷಿಗಳು ನೆಲದ ಮೇಲೆ ಯಾಕೆ ಕುಳಿತಿದ್ದವು ಅಂತ ಅರ್ಥವಾಗ್ಲಿಲ್ಲ ಎಂದಿದ್ದಾರೆ.
ವಿಜ್ಞಾನಿಗಳು ಹೇಳೋದಿಷ್ಟು: ಅಷ್ಟೊಂದು ಪಕ್ಷಿಗಳು ನೆಲದ ಮೇಲೆ ಕುಳಿತಿದ್ದು ಯಾಕೆ ಅಂತ ಈಗ ವಿಜ್ಞಾನಿಗಳು ವಿವರಿಸಿದ್ದಾರೆ. ಈ ಹೊತ್ತಲ್ಲಿ ಪಕ್ಷಿಗಳು ಮರದಲ್ಲಿ ಮಲಗಿರಬೇಕಿತ್ತು. ಆದ್ರೆ ಪೆಟ್ರೋಲ್ ಬಂಕ್‍ನ ಪ್ರಕಾಶಮಾನವಾದ ವಿದ್ಯುತ್ ಬೆಳಕಿಗೆ ಆಕರ್ಷಿತವಾಗಿ ಅಲ್ಲಿಗೆ ಬಂದಿವೆ ಎಂದು ಹೇಳಿದ್ದಾರೆ.
ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿಯ ಡಾ. ಕೆವಿನ್ ಮೆಕ್‍ಗಾವ್ನ್ ಈ ಬಗ್ಗೆ ಮಾತನಾಡಿ, ಈ ಜಾತಿಯ ಪಕ್ಷಿಗಳು ಸಾಮಾನ್ಯವಾಗಿ ಕಾರ್ ಪಾರ್ಕ್‍ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬಂದು ನಿದ್ದೆ ಮಾಡುತ್ತವೆ ಎಂದಿದ್ದಾರೆ.
ಯೇಲ್‍ನ ಆರ್ನಿಥಾಲಜಿ(ಪಕ್ಷಿ ವಿಜ್ಞಾನ) ಪ್ರಾಧ್ಯಾಪಕರಾದ ರಿಚರ್ಡ್ ಪ್ರಮ್ ಪ್ರತಿಕ್ರಿಯಿಸಿ, ಬಹುಶಃ ಆ ರಾತ್ರಿ ಈ ಪಕ್ಷಿಗಳ ಮೂಲ ಸ್ಥಳದಲ್ಲಿ ಏನೋ ತೊಂದರೆಯಾಗಿರಬಹುದು. ಹೀಗಾಗಿ ಅವು ಹೆಚ್ಚಿನ ಬೆಳಕಿದ್ದ ಸ್ಥಳಕ್ಕೆ ಬಂದಿವೆ. ಪಕ್ಷಿಗಳ ನಿದ್ದೆಗೆ ಅಡಚಣೆಯಾಗಿ ಅವು ಕತ್ತಲಲ್ಲಿ ಆ ಸ್ಥಳವನ್ನ ಬಿಟ್ಟು ಬಂದಿವೆ ಎಂದಿದ್ದಾರೆ. ಇಂಥ ಸಂದರ್ಭದಲ್ಲಿ ಅವು ಸುರಕ್ಷಿತ ಜಾಗವನ್ನ ಹುಡುಕಿ ಹಾರಿಬಿಡುತ್ತವೆ. ಈ ಕಾರಣ ಚೆನ್ನಾಗಿ ಬೆಳಕಿದ್ದ ಪೆಟ್ರೋಲ್ ಬಂಕ್‍ಗೆ ಬಂದಿರಬಹುದು. ಅವು ಅಲ್ಲಿ ಏನೂ ತಿನ್ನುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಅಲ್ಲಿಗೆ ಅವು ಬರಲು ಬೆಳಕು ಹಾಗು ತೊಂದರೆ ಬರಲ್ಲ ಎನ್ನುವ ಕಾರಣ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದ್ದಾರೆ.
https://www.youtube.com/watch?v=FofoSA-FKy0