ಹುತಾತ್ಮ ಯೋಧರ ಅಂತಿಮ ದರ್ಶನಕ್ಕೆ ಸೇರಿತು ಜನಸಾಗರ

Public TV
1 Min Read
CRPF UP

– ದೆಹಲಿ ಸಮೀಪದ ರಾಜ್ಯಗಳಿಗೆ ತಲುಪಿತು ಯೋಧರ ಮೃತದೇಹ

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಅಂತಿಮ ದರ್ಶನಕ್ಕೆ ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡದದಲ್ಲಿ ಜನಸಾಗರವೇ ಹರಿದುಬರುತ್ತಿದೆ. ಯೋಧರ ಮೃತದೇಹ ಸಾಗಿಸುವ ಮಾರ್ಗದ ಬದಿಯಲ್ಲಿ ಹೂವು, ತ್ರಿವರ್ಣ ಧ್ವಜ ಹಿಡಿದುಕೊಂಡು, ಕಣ್ಣೀರು ಸುರಿಸುತ್ತಾ ಗೌರವ ಸಲ್ಲಿಸಿದ್ದಾರೆ.

ಯೋಧ ಅಜಿತ್ ಕುಮಾರ್ (35) ಮೃತದೇಹವು ಉತ್ತರ ಪ್ರದೇಶದ ಉನ್ನವೋಗೆ ಇಂದು ಬೆಳಗ್ಗೆ 7 ಗಂಟೆಗೆ ತಲುಪಿತು. ಅಜಿತ್ ಕುಮಾರ್ ಅವರ ಪತ್ನಿ, ಇಬ್ಬರು ಪುತ್ರಿಯರು, ಕುಟುಂಬಸ್ಥರು, ಸ್ಥಳೀಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ವೀರ ಯೋಧನ ಅಂತಿಮ ದರ್ಶನವನ್ನು ಪಡೆದ ಸ್ಥಳೀಯರು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಜಿತ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಗಂಗಾ ಘಾಟ್‍ನಲ್ಲಿ ನೆರವೇರಿಸಲು ಸಿದ್ಧತೆ ನಡೆದಿದೆ.

ಯೋಧ ರಮೇಶ್ ಯಾದವ್ ಅವರ ಮೃತ ದೇಹವು ವಾರಣಾಸಿಯ ತೋಫಪುರ್ ಗೆ ಬೆಳಗ್ಗೆ 3.30 ಕ್ಕೆ ತಲುಪಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಿಡಿದು ಅಂತ್ಯಕ್ರಿಯೆ ನಡೆಯುವ ಜಾಗದಲ್ಲಿ ನಿಂತು ವೀರ ಯೋಧನಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಸಿಆರ್‌ಪಿಎಫ್ ಯೋಧ ರೋಹಿತಾಷ್ ಲಾಂಬಾ ಅವರ ಮೃತ ದೇಹವು ರಾಜಸ್ಥಾನದ ಗೋವಿಂದಾಪುರ್ ಅವರ ಮನೆಗೆ ಬೆಳಗ್ಗೆ 8.40ಕ್ಕೆ ತಲುಪಿದೆ. ಸಾವಿರಾರು ಜನರು ವೀರ ಮರಣ ಹೊಂದಿದ ರೋಹಿತಾಷ್ ಲಾಂಬಾ ಅವರ ಕುಟುಂಬಸ್ಥರ ಜೊತೆಗೆ ಗೌರವ ಸಲ್ಲಿಸಿದರು.

ಉತ್ತರಖಾಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಡೆಹ್ರಾಡೂನ್‍ಗೆ ಆಗಮಿಸಿದ ಹುತಾತ್ಮರಾದ ಸಿಆರ್‍ಪಿಎಫ್ ಎಎಸ್‍ಐ ಮೋಹನ್ ಲಾಲ್ ಅವರಿಗೆ ನಮನ ಸಲ್ಲಿಸಿದರು. ಈ ವೇಳೆ ಅಲ್ಲಿ ಸೇರಿದ್ದ ನೂರಾರು ಜನರು ಮೋಹಲ್ ಲಾಲ್ ಅವರಿಗೆ ಜಯ ಘೋಷನೆ ಕೂಗಿ, ಗೌರವ ನಮನ ಅರ್ಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *