ರಾಮನಗರ: ಕೈಲಾಂಚ ಹೋಬಳಿಯ ಐತಿಹಾಸಿಕ ಪ್ರಸಿದ್ಧ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿನ ಅನ್ನದಾಸೋಹ ಕಟ್ಟಡದಲ್ಲಿ ಕಳ್ಳರು ಕೈಚಳಕ ತೋರಿದ್ದು, ಹುಂಡಿಯ ಹಣವನ್ನು ಹೊತ್ತೊಯ್ದಿದ್ದಾರೆ.
ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಭಕ್ತರು ಪ್ರಸಾದ ಸೇವನೆ ಮಾಡಿದ ಬಳಿಕ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಹುಂಡಿಯಲ್ಲಿ ಹಾಕುತ್ತಿದ್ದರು. ಈ ಹುಂಡಿಯ ಮೇಲೆ ಕಳ್ಳರ ಕಣ್ಣು ಬಿದ್ದಿತ್ತು. ರಾತ್ರಿ ದಾಸೋಹ ಕಟ್ಟಡದಲ್ಲಿದ್ದ ಹುಂಡಿಯನ್ನು ಕದ್ದು, ದೇವಾಲಯದ ಪಕ್ಕದ ಜಮೀನಿನಲ್ಲಿ ಹುಂಡಿಯ ಬೀಗ ಒಡೆದು, ನೋಟುಗಳನ್ನ ತೆಗೆದುಕೊಂಡ ನಂತರ ಹುಂಡಿಯನ್ನು ಹಾಗೂ ಅದರಲ್ಲಿದ್ದ ಚಿಲ್ಲರೆ ಕಾಸನ್ನು ಬಿಟ್ಟು ಹೋಗಿದ್ದಾರೆ.
ಬೆಳಿಗ್ಗೆ ಎಂದಿನಂತೆ ದಾಸೋಹ ಭವನಕ್ಕೆ ಬಂದ ದೇವಸ್ಥಾನದ ಸಿಬ್ಬಂದಿಗೆ ಹುಂಡಿ ಕಳ್ಳತನ ಆಗಿರುವುದು ತಿಳಿದು ಬಂದಿದೆ. ದಾಸೋಹ ಭವನದಲ್ಲಿ ಇರಿಸಲಾಗಿದ್ದ ಹುಂಡಿಯಲ್ಲಿನ ಹಣವನ್ನು ಕಳೆದ ನಾಲ್ಕು ತಿಂಗಳಿನಿಂದ ಹೊರಗೆ ತೆಗೆದಿರಲಿಲ್ಲ ಈ ಬಗ್ಗೆ ಮಾಹಿತಿ ಇರುವವರೇ ಕಳವು ಮಾಡಿರಬಹುದೆಂದು ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಗೆ ದೇವಸ್ಥಾನದ ಟ್ರಸ್ಟ್ ನವರು ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.