ಕೊಪ್ಪಳ: ಓಮಿಕ್ರಾನ್ ಸೋಂಕು ಹೆಚ್ಚಳದಿಂದಾಗಿ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ದರ್ಶನಕ್ಕೆ ಬರುವವರ ಸಂಖ್ಯೆ ಕ್ಷೀಣಿಸಿದೆ. ಆದರೂ, ಇಂದು ನಡೆದ ಹುಂಡಿ ಹಣ ಎಣಿಕೆಯಲ್ಲಿ 10.45 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. 3 ವಿದೇಶಿ ನಾಣ್ಯಗಳು ಕೂಡ ಕಾಣಿಕೆಯಾಗಿ ಬಂದಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿರುವ ಅಂಜನಾದ್ರಿ ಬೆಟ್ಟದಲ್ಲಿ ಇಂದು ಗ್ರೇಡ್-2 ತಹಶೀಲ್ದಾರ್ ವಿ.ಹೆಚ್.ಹೊರಪೇಟೆ ಅವರ ನೇತೃತ್ವದಲ್ಲಿ ಬೆಳಗ್ಗೆ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ಕಾಣಿಕೆ ಎಣಿಕೆ ನಡೆಸಲಾಯಿತು.
31 ದಿನದ ಅವಧಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿರುವುದು ಕಂದಾಯ ಮತ್ತು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಅಮೆರಿಕಾ ಮತ್ತು ಫಿಲಿಫೈನ್ ದೇಶದ ಮೂರು ನಾಣ್ಯಗಳು ಕಾಣಿಕೆ ರೂಪವಾಗಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೋಯಿಂಗ್ ವಾಹನ ಸಿಬ್ಬಂದಿ ಅಮಾನುಷವಾಗಿ ವರ್ತಿಸಿಲ್ಲ, ಅದೆಲ್ಲಾ ಸುಳ್ಳು: ಆರಗ ಜ್ಞಾನೇಂದ್ರ
ಹುಂಡಿಯಲ್ಲಿ ಹರಕೆ ಪತ್ರ
ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ, ಹೆರಿಗೆ ಸೂಸುತ್ರವಾಗಿ ಆಗಲಿ. ನನ್ನ ಮೇಲೆ ಯಾವುದೇ ಪ್ರಕರಣ ಇಲ್ಲದಂತೆ ಮಾಡು ಭಗವಂತ ಎಂಬ ಹಲವು ಹರಕೆಯಿರುವ ಭಕ್ತನೊಬ್ಬನ ಪತ್ರ ಹುಂಡಿಯಲ್ಲಿ ಸಿಕ್ಕಿದೆ. ಹುಂಡಿ ಎಣಿಕೆಯಲ್ಲಿ ಭಕ್ತನೊಬ್ಬನ ಹರಕೆ ಪತ್ರ ಓದಿದ ಕಂದಾಯ ಇಲಾಖೆ ಸಿಬ್ಬಂದಿ, ದೇವರೇ ಆ ಭಕ್ತನ ಬೇಡಿಕೆ ಈಡೇರಿಸಪ್ಪಾ ಎಂದು ನಗು ಬೀರಿದ್ದಾರೆ.