ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುತ್ತಾರೆಂದು ಹಂಪ್ಸ್ ನ ನೆಲಸಮ ಮಾಡಿಲಾಗಿದ್ದು, ಇದೀಗ ಸಿಎಂ ಅವರಿಂದಾಗಿ ಒಂದು ಗ್ರಾಮದ ಮಕ್ಕಳು ಜೀವಭಯದಿಂದ ಶಾಲೆಗೆ ತೆರಳಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿದಿನ ಭಯದಲ್ಲಿ ಓಡಾಡುತ್ತಿದ್ದಾರೆ. ಈ ಶಾಲೆ ಪಕ್ಕದಲ್ಲಿಯೇ ಮಿರಜ್-ಗೋಟೂರ್ ರಾಜ್ಯ ಹೆದ್ದಾರಿ ಇದೆ. ಮಕ್ಕಳು ರಸ್ತೆ ದಾಟುವಾಗ ಅಪಘಾತಗಳು ಸಂಭವಿಸಬಾರದು ಎಂದು ಲೋಕೋಪಯೋಗಿ ಇಲಾಖೆ ವೇಗ ನಿಯಂತ್ರಕಗಳನ್ನು ಅಳವಡಿಸಿತ್ತು. ಆದರೆ ಮೂರು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಈ ರಸ್ತೆಯಲ್ಲಿ ಬರುತ್ತಾರೆ ಎಂದು ರಸ್ತೆಯಲ್ಲಿದ್ದ ಹಂಪ್ಸ್ ಗಳನ್ನು ತೆಗೆಯಲಾಗಿತ್ತು. ಇದಾದ ಬಳಿಕ ಪುನಃ ವೇಗ ನಿಯಂತ್ರಕ ಅಳವಡಿಸಲು ಲೋಕೋಪಯೋಗಿ ಇಲಾಖೆ ಮನಸ್ಸು ಮಾಡಿಲ್ಲ.
Advertisement
Advertisement
340 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಗೋಟೂರು ಪ್ರಾಥಮಿಕ ಶಾಲೆಗೆ ಆಗಮಿಸುತ್ತಾರೆ. ಮಕ್ಕಳು ಪ್ರತಿದಿನ ಜೀವ ಭಯದಲ್ಲೇ ರಸ್ತೆ ದಾಟುತ್ತಿದ್ದು, ಈಗಾಗಲೇ ಅಪಘಾತದಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಎಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಎಸ್‍ಡಿಎಂಸಿ ಸದಸ್ಯ ರುದ್ರಗೌಡ ಪಾಟೀಲ ಹೇಳಿದ್ದಾರೆ.