– NHRC ಯಿಂದ ಪ.ಬಂಗಾಳ ಡಿಜಿಪಿಗೆ ನೋಟಿಸ್
ನವದೆಹಲಿ: ಪಶ್ಚಿಮ ಬಂಗಾಳದ (West Bengal) ಸಂದೇಶ್‌ಖಾಲಿಯಲ್ಲಿ (Sandeshkhali) ತೃಣಮೂಲ ಕಾಂಗ್ರೆಸ್‌ನ ಪ್ರಬಲ ವ್ಯಕ್ತಿಯಿಂದ ಮಹಿಳೆಯರ ಮೇಲಿನ ಶೋಷಣೆಯ ಬಗ್ಗೆ ಆರೋಪಗಳು ಕೇಳಿಬಂದ ಬೆನ್ನಲ್ಲೇ ಪರಿಸ್ಥಿತಿ ಉದ್ವಿಗ್ನ ರೂಪಕ್ಕೆ ತಿರುಗಿದೆ. ಈ ನಡುವೆ ‘ಮಾನವ ಹಕ್ಕುಗಳ ಉಲ್ಲಂಘನೆ’ (Violation Of Human Rights) ಆರೋಪ ಕೇಳಿಬಂದಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಸಂದೇಶ್‌ಖಾಲಿಯಲ್ಲಿ ‘ಮಾನವ ಹಕ್ಕುಗಳ ಉಲ್ಲಂಘನೆ’ ಯಾಗಿದೆ ಎನ್ನಲಾಗಿದೆ. ಆದ್ದರಿಂದ ಪ್ರಕರಣದ ಸುತ್ತಲಿನ ಸತ್ಯಾಸತ್ಯತೆಗಳನ್ನು ಕಂಡುಹಿಡಿಯಲು ‘ಸ್ಥಳೀಯ ವಿಚಾರಣೆ’ ನಡೆಸಲು ಎನ್‌ಹೆಚ್‌ಆರ್‌ಸಿ ವಿಶೇಷ ತಂಡವನ್ನು ಕಳುಹಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಎನ್‌ಎಚ್‌ಆರ್‌ಸಿ ಸದಸ್ಯರ ನೇತೃತ್ವ ಮತ್ತು ಪ್ಯಾನಲ್ ಅಧಿಕಾರಿಗಳ ಬೆಂಬಲದೊಂದಿಗೆ ತಂಡವು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುತ್ತದೆ. ತನಿಖೆಯ ಪ್ರಾಥಮಿಕ ಆಧಾರವಾಗಿ ಮಾಧ್ಯಮ ವರದಿಗಳನ್ನೂ ಪರಿಗಣಿಸಿದೆ.
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮುಗ್ಧ ಮತ್ತು ಬಡ ಮಹಿಳೆಯ ಮೇಲೆ ಸ್ಥಳೀಯ ರಾಜಕೀಯ ಪ್ರಭಾವಿಯ ಗ್ಯಾಂಗ್‌ನಿಂದ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮ ವರದಿಗಳನ್ನು ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ. ಘೋರ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಸ್ಥಳೀಯ ಆಡಳಿತವು ಅಪರಾಧ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಮಾನವ ಹಕ್ಕುಗಳ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
1993ರ ಪಿಹೆಚ್‌ಆರ್ ಕಾಯ್ದೆಯ ಸೆಕ್ಷನ್ 12 (ಎ) ಅಡಿಯಲ್ಲಿ ತನ್ನ ನ್ಯಾಯವ್ಯಾಪ್ತಿಯನ್ನು ಚಲಾಯಿಸುವುದಾಗಿ ಎನ್‌ಹೆಚ್‌ಆರ್‌ಸಿ ಹೇಳಿದೆ. ಈ ನಿಬಂಧನೆಯು ಮಾನವ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಎನ್‌ಹೆಚ್‌ಆರ್‌ಸಿಗೆ ಅಧಿಕಾರ ನೀಡುತ್ತದೆ.
ಸದ್ಯ ಇನ್ನೂ ನಾಲ್ಕು ವಾರಗಳಲ್ಲಿ ಘಟನೆಯ ಸಂಪೂರ್ಣ ವರದಿ ನೀಡುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನೋಟಿಸ್ ನೀಡಲಾಗಿದೆ. ಜೊತೆಗೆ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆಯೇ ಅಥವಾ ಪರಿಹಾರ ಸೂಚಿಸಲು ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸುವಂತೆ ಎನ್‌ಹೆಚ್‌ಆರ್‌ಸಿ ಕೇಳಿದೆ.