ಬೆಂಗಳೂರು: ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು (Azim Premji Foundation) ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದ ಅವರು, ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ವತಿಯಿಂದ ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ.ಗಳ ಆರೋಗ್ಯ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಇದಕ್ಕಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಆವರಣದಲ್ಲಿ ಸರ್ಕಾರ 10 ಎಕರೆ ಸ್ಥಳವನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಂದವಾಗಿದೆ ಎಂದರು.
ಅಜೀಂ ಪ್ರೇಮ್ ಜಿ ಅವರ ಈ ಮಹತ್ಕಾರ್ಯಕ್ಕೆ ಸರ್ಕಾರ ಆಭಾರಿಯಾಗಿದೆ. ಅದರಲ್ಲಿಯೂ ಉಚಿತವಾಗಿ ಈ ಕಾರ್ಯವನ್ನು ನೆರವೇರಿಸಲು ಮುಂದಾಗಿರುವುದು ಶ್ರೇಷ್ಠ ಕಾರ್ಯ. ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಕಳೆದ 25 ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದೆ. 2021ರಲ್ಲಿ ಶಿಕ್ಷಕರ ತರಬೇತಿಗೆ, 2024ರಲ್ಲಿ ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯವರೆಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಕೊಡುವ ಕಾರ್ಯಕ್ರಮಕ್ಕೆ ಒಂದೂವರೆ ಕೋಟಿ ರೂ. ನೀಡುವ ಮೂಲಕ ಕೈಜೋಡಿಸಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಓದಿರುವವರಿಗೆ ವರ್ಷಕ್ಕೆ 30 ಸಾವಿರ ವಿದ್ಯಾರ್ಥಿ ವೇತನವನ್ನು ದೀಪಿಕಾ ವಿದ್ಯಾರ್ಥಿ ವೇತನದಡಿ ನೀಡುತ್ತಿದ್ದಾರೆ ಎಂದು ತಿಳಿಸಿದ ಅವರು, ಅಜೀಂ ಪ್ರೇಮ್ ಜಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ್ ಬೆಹರ್, ಸಾರ್ವಜನಿಕ ವ್ಯವಸ್ಥೆಗಳಲ್ಲಿ ನಂಬಿಕೆಯಿಟ್ಟಿರುವ ಸಂಸ್ಥೆಯಾಗಿದ್ದು, ಸಾರ್ವಜನಿಕ ವ್ಯವಸ್ಥೆಗಳು ಬಲಗೊಳ್ಳಬೇಕು ಎಂದರು. ಆರೋಗ್ಯ ಶುರುವಾಗುವುದು ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ. ನಮ್ಮ ಜನತೆ ಖಾಯಿಲೆ ಬೀಳದಿರುವಂತೆ ತಡೆಯುವುದು ನಮ್ಮ ಮುಖ್ಯ ಗುರಿಯಾಗಬೇಕು. ಕರ್ನಾಟಕ ಅತ್ಯಂತ ಕ್ರಿಯಾಶೀಲ ರಾಜ್ಯವಾಗಿದ್ದು, ಆರೋಗ್ಯ ವ್ಯವಸ್ಥೆಯನ್ನು ಬಲಬಡಿಸುವಲ್ಲಿ ಅಧಿಕಾರಿಗಳು, ಆಡಳಿತ ಒಟ್ಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

