ಕೇಂದ್ರ VS ದೆಹಲಿ ಸರ್ಕಾರ – ಸುಪ್ರೀಂ ಆದೇಶದಿಂದ ಆಪ್‌ಗೆ ಬಿಗ್‌ ವಿಕ್ಟರಿ

Public TV
1 Min Read
Arvind Kejriwal

ನವದೆಹಲಿ: ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಹೊರತುಪಡಿಸಿ ಭಾರತೀಯ ಆಡಳಿತಾತ್ಮಕ ಸೇವೆಗಳು ಮತ್ತು ರಾಜಧಾನಿಯಲ್ಲಿನ ಎಲ್ಲಾ ಸೇವೆಗಳ ಮೇಲೆ ದೆಹಲಿ ಸರ್ಕಾರ ತನ್ನ ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.

ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ನಡುವೆ ನಡೆಯುತ್ತಿದ್ದ ಆಡಳಿತಾತ್ಮಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಆಮ್ ಅದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಇಂದು ಪೂರ್ಣ ಪ್ರಮಾಣ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ನೀಡಲು ನಿರಾಕರಿಸಿದೆ.

SUPREME COURT

ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳನ್ನು ನಿಯಂತ್ರಿಸಲು ಅನುಮತಿಸದಿದ್ದರೆ ಶಾಸಕಾಂಗ ಮತ್ತು ಸಾರ್ವಜನಿಕರ ಕಡೆಗೆ ಅದರ ಜವಾಬ್ದಾರಿಯನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

ಆದರೆ ದೆಹಲಿ ಇತರೆ ಕೇಂದ್ರಾಡಳಿತ ಪ್ರದೇಶಗಳಂತಲ್ಲ, ಇಲ್ಲಿ ರಾಜಕೀಯ ದ್ವಂದ್ವಗಳಿದೆ. ಭಾರತದ ಒಕ್ಕೂಟ ವ್ಯವಸ್ಥೆ ವೈವಿಧ್ಯಮಯ ಹಿತಾಸಕ್ತಿಗಳ ಉಳಿವು ಮತ್ತು ವೈವಿಧ್ಯಮಯ ಅಗತ್ಯಗಳಿಗೆ ಅವಕಾಶ ಕಲ್ಪಿಸುತ್ತದೆ. ಒಂದು ರಾಷ್ಟ್ರೀಯ ಸರ್ಕಾರ ಮತ್ತೊಂದು ಪ್ರಾದೇಶಿಕ ಸರ್ಕಾರ ದೆಹಲಿಯಲ್ಲಿದೆ. ಉಭಯ ಸರ್ಕಾರಗಳು ಸಾರ್ವಜನಿಕ ಅಭಿವ್ಯಕ್ತಿಯಿಂದ ಬಂದಿದೆ ಎಂದು ಸುಪ್ರೀಂ ಹೇಳಿದೆ.

ದೆಹಲಿ ಪೂರ್ಣ ಪ್ರಮಾಣದ ರಾಜ್ಯವಲ್ಲದಿದ್ದರೂ ಶಾಸನ ಮಾಡಲು ಅಧಿಕಾರವನ್ನು ಹೊಂದಿದೆ. 239AA ಸಂವಿಧಾನದೊಂದಿಗೆ ಒಕ್ಕೂಟ ಸರ್ಕಾರವನ್ನು ರಚಿಸಲಾಗಿದೆ. ಕೇಂದ್ರಾಡಳಿತ ಪ್ರದೇಶ ಅದರ ಒಂದು ಘಟಕವಾಗಿದೆ. ಕೇಂದ್ರಾಡಳಿತ ಶಾಸನ ಸಭೆಗೂ ಅಧಿಕಾರವಿದೆ. ಆದರೆ ರಾಜ್ಯದ ಕಾರ್ಯಕಾರಿ ಅಧಿಕಾರವು ಒಕ್ಕೂಟದ ಅಸ್ತಿತ್ವದಲ್ಲಿರುವ ಕಾನೂನಿಗೆ ಒಳಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ವಿಧಿ 41 ಅಡಿಯಲ್ಲಿ ಸಾರ್ವಜನಿಕ ಸೇವೆಗಳ ಮೇಲೆ ಶಾಸಕಾಂಗ ನಿಯಂತ್ರಣವನ್ನು ಹೊಂದಿದೆ. ಅದಾಗ್ಯೂ ಅದು ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ವಿಚಾರಗಳಲ್ಲ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಆಮ್ ಅದ್ಮಿ ಪಕ್ಷಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದ್ದು, ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪಕ್ಕೆ ಬ್ರೇಕ್ ಬಿದ್ದಿದೆ.

Share This Article