ಬೆಂಗಳೂರು: ನಗರದಲ್ಲಿರುವ ಗುಂಡಿಯನ್ನು ಮುಚ್ಚುವ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಗುಂಡಿಗಳು ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಟಿಎಂ ಗಳಾಗಿ ಮಾರ್ಪಟ್ಟಿವೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.
ಹೌದು, ಬಿಬಿಎಂಪಿ ಅಧಿಕಾರಿಗಳಿಗೆ ಗುಂಡಿಗಳೆಂದರೆ ಪಂಚಪ್ರಾಣ. ಕಾರ್ಪೋರೇಟರ್ ಗಳು ಮತ್ತು ಗುತ್ತಿಗೆದಾರರಿಗಂತು ಗುಂಡಿಗಳು ಎಂದರೆ ಮೃಷ್ಟಾನ್ನ ಭೋಜನವಿದ್ದಂತೆ. ಇದು ರಾಜಧಾನಿಯ ನಾಗರಿಕರ ದೌರ್ಭಾಗ್ಯವೋ ಅಥವಾ ವ್ಯವಸ್ಥೆ ಇರೋದೇ ಹೀಗೆಯೋ ಎಂಬುವುದು ಗೊತ್ತಿಲ್ಲ. ಒಂದು ಕಡೆ ಕೆಐಎಡಿಬಿ ಮುಖ್ಯ ಎಂಜಿನಿಯರ್ ಟಿ.ಆರ್.ಸ್ವಾಮಿ, ಬಿಡಿಎ ಅಧೀಕ್ಷಕ ಅಭಿಯಂತರ ಗೌಡಯ್ಯ ಅಂತಹವರು ತಿಂದು ತೇಗುತ್ತಿದ್ದರೆ, ನಾವೇನೂ ಕಡಿಮೆ ಇಲ್ಲ ಅಂತ ಗುತ್ತಿಗೆದಾರರು ದಷ್ಟಪುಪ್ಠವಾಗಿ 1,122 ಕೋಟಿ ರೂಪಾಯಿ ಗುಳುಂ ಮಾಡಿದ್ರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಇದಲ್ಲದೇ ಬೆಂಗಳೂರಿನ ಗುಂಡಿಗಳನ್ನು ಮುಚ್ಚೋಕೆ 1,700 ಕೋಟಿ ರೂಪಾಯಿ ಬೇಕು ಅಂತ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
Advertisement
Advertisement
2018 ರ ಜೂನ್ 15 ರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಇದ್ದ ಗುಂಡಿಗಳ ಸಂಖ್ಯೆ 15,239 ಆಗಿತ್ತು. 2018 ರ ಜುಲೈನಲ್ಲಿ 14,299 ಗುಂಡಿ ಮುಚ್ಚಿದ್ದೇವೆ ಎಂದು ಗುತ್ತಿಗೆದಾರರು ಪಾಲಿಕೆ ವರದಿ ನೀಡಿದ್ದರು. ಹೀಗಾಗಿ ಗುಂಡಿ ಮುಚ್ಚುವ ಕೆಲಸಕ್ಕೆ ಬಿಬಿಎಂಪಿ 1,122 ಕೋಟಿ ರೂಪಾಯಿ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿತ್ತು. ಆದರೆ ಇತ್ತೀಚೆಗೆ ಹೈಕೋರ್ಟ್ ಛಾಟಿ ಬೀಸಿದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಹೊಸದಾಗಿ ಗುಂಡಿಗಳನ್ನು ಪತ್ತೆಹಚ್ಚಿ ವರದಿ ಸಲ್ಲಿಸಿದ್ದಾರೆ.
Advertisement
ವಿಚಿತ್ರ ಅಂದರೆ 4 ತಿಂಗಳ ಹಿಂದಷ್ಟೇ ಗುಂಡಿ ಮುಚ್ಚಿದ್ದಕ್ಕೆ 1,122 ಕೋಟಿ ರೂಪಾಯಿ ಕೊಟ್ಟಿದೆ ಅಂತಾ ಬಿಬಿಎಂಪಿ ಲೆಕ್ಕ ತೋರಿಸಿದೆ. ಆದರೆ ಇದೀಗ ನಗರದಲ್ಲಿ 536 ಗುಂಡಿಗಳಿದ್ದು ಅವುಗಳನ್ನು ಮುಚ್ಚುವುದಕ್ಕೆ 1,700 ಕೋಟಿ ರೂಪಾಯಿ ಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ. ಹಾಗಾದರೆ ಜುಲೈ ತಿಂಗಳಲ್ಲಿ ಮುಚ್ಚಿದ ಗುಂಡಿ ಯಾವುದು? ಈಗ ತೋರಿಸುತ್ತಿರುವ ಗುಂಡಿಗಳು ಯಾವುದು? ನಿಜಕ್ಕೂ ಗುಂಡಿ ತೋರಿಸಿ ನಮ್ಮ ಜನಪ್ರತಿನಿಧಿಗಳು ಹಬ್ಬದೂಟ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಕಾಡುತ್ತಿದ್ದು, ಇದಕ್ಕೆ ಸಂಬಂಧಪಟ್ಟವರೇ ಉತ್ತರ ನೀಡಬೇಕಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv